ಜಿಲ್ಲೆಯಲ್ಲಿ 18 ನಾಮಪತ್ರ ಸಲ್ಲಿಕೆ
ಗದಗ: ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಜಿಲ್ಲೆಯಲ್ಲಿ ಮಂಗಳವಾರ 13 ಅಭ್ಯರ್ಥಿಗಳು ಒಟ್ಟು 18 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಶಿರಹಟ್ಟಿ ಮತಕ್ಷೇತ್ರದಲ್ಲಿ 4 ಅಭ್ಯರ್ಥಿಗಳು 5, ಗದಗ ಕ್ಷೇತ್ರದಲ್ಲಿ ಓರ್ವ ಅಭ್ಯರ್ಥಿ 1 ನಾಮಪತ್ರ, ರೋಣ ಕ್ಷೇತ್ರದಲ್ಲಿ 4 ಅಭ್ಯರ್ಥಿಗಳು 6 ಹಾಗೂ ನರಗುಂದ ಮತಕ್ಷೇತ್ರದಲ್ಲಿ 4 ಅಭ್ಯರ್ಥಿಗಳು 6 ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಈವರೆಗೆ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ 35 ಅಭ್ಯರ್ಥಿಗಳು 54 ನಾಮಪತ್ರಗಳನ್ನು ಸಲ್ಲಿಸಿದಂತಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಾಂಡುರಂಗ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಶಿವನಗೌಡರ ನಾಮಪತ್ರ ಸಲ್ಲಿಕೆ
ಗದಗ: ನರಗುಂದ ವಿಧಾನಸಭಾ ಕ್ಷೇತ್ರದ ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಎಚ್. ಶಿವನಗೌಡರ ಏ. 17ರ ಬೆಳಗ್ಗೆ 10 ಗಂಟೆಗೆ ಪುರಸಭೆ ಹತ್ತಿರವಿರುವ ಬಾಬಾಸಾಹೇಬ್ ಅಂಬೇಡ್ಕರರ ಮೂರ್ರ್ತಿಗೆ ಮಾಲಾರ್ಪಣೆ ಮಾಡಿ ಬೃಹತ್ ಮೆರವಣೆಗೆ ಮೂಲಕ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ನಾಮಪತ್ರ ಸಲ್ಲಿಸುವರು. ನರಗುಂದ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ನರಗುಂದ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮಹೇಶಗೌಡ ಮೇಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--
ಪ್ರಾದೇಶಿಕ ಅಸಮಾನತೆ ಹೋಗಲಾಡಿಸಿದ ಬಿಎಸ್ವೈ
ಬ್ಯಾಡಗಿ: ಧೂಳು ತಿನ್ನುತ್ತಿದ್ದ ಡಾ ನಂಜುಂಡಪ್ಪ ವರದಿಗೆ ಬಜೆಟ್ನಲ್ಲಿ ಅಗತ್ಯ ಅನುದಾನ ನೀಡುವ ಮೂಲಕ ಅನುಷ್ಠಾನಗೊಳಿಸಿದ ಬಿ.ಎಸ್. ಯಡಿಯೂರಪ್ಪ ಪ್ರಾದೇಶಿಕ ಅಸಮಾನತೆ ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಕೆಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಹೇಳಿದರು.
ಮಂಗಳವಾರ ತಾಲೂಕಿನ ಹಿರೇಹಳ್ಳಿ, ಸಿದ್ದಾಪುರ, ಅತ್ತಿಕಟ್ಟಿ, ದುಮ್ಮಿಹಾಳ ಹಾಗೂ ಹಿರೇಅಣಜಿ ಗ್ರಾಮಗಳಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ನಡೆಸಿ ಬಳಿಕ ಅವರು ಮಾತನಾಡಿದರು.
ಈ ಹಿಂದೆ ಅಧಿಕಾರ ನಡೆಸಿದ ಸರ್ಕಾರಗಳು ತಾರತಮ್ಯ ನಡೆಸಿದ್ದು, ಪ್ರಾದೇಶಿಕ ಅಸಮತೋಲನದಿಂದಾಗಿ ಉತ್ತರ ಕರ್ನಾಟಕದ ಬಹಳಷ್ಟು ಪ್ರದೇಶ ಯಾವುದೇ ಅಭಿವೃದ್ಧಿ ಕಾಣದೇ ಹೋಗಿದ್ದವು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅಧಿಕಾರಕ್ಕೆ ಬಂದ ಕೂಡಲೇ ನಂಜುಂಡಪ್ಪ ವರದಿಗೆ ಚಾಲನೆ ನೀಡಿದ್ದಲ್ಲದೇ ರು. 1,500 ಕೋಟಿ ಅನುದಾನ ಒದಗಿಸುವ ಮೂಲಕ ಬ್ಯಾಡಗಿ ಮತಕ್ಷೇತ್ರದ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಕೊಂಡಿದ್ದಾರೆ ಎಂದರು.
ಅಧಿಕಾರದಾಸೆಗಾಗಿ ಪಕ್ಷ ಕಟ್ಟಿ ಬೆಳೆಸಿದ ಬಿಎಸ್ವೈಗೆ ನಂಬಿಕೆ ದ್ರೋಹ ಮಾಡಿದ ಬಿಜೆಪಿ ವರಿಷ್ಠರು ಬರುವ ಚುನಾವಣೆಯ ಫಲಿತಾಂಶದ ಬಳಿಕ ಪಶ್ಚಾತ್ತಾಪ ಪಡಲಿದ್ದಾರೆ, ಭಿನ್ನಮತದ ಬಿರುಗಾಳಿಗೆ ಸಿಲುಕಿರುವ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ಪೂರ್ವ ಸಮೀಕ್ಷೆಗಳು ದಾರಿ ತಪ್ಪಿಸಿದ್ದು, ಪಕ್ಷದ ಹಿರಿಯ ನಾಯಕರು ಮುಖ್ಯಮಂತ್ರಿ ಸ್ಥಾನಕ್ಕೆ ಕಚ್ಚಾಡುತ್ತಿರುವುದು ಹಾಸ್ಯಾಸ್ಪದ ವಿಷಯವಾಗಿದೆ ಎಂದರು.
ರಾಜ್ಯದ ಬಡ ರೈತರು ಹಾಗೂ ಬಡವರಿಗೆ ಮತ್ತು ಹಿಂದುಳಿದ ಜನತೆಗೆ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಬಿಎಸ್ವೈಗೆ ನಿಷ್ಠೆ ತೋರಿಸಿ ಕೆಜೆಪಿಯನ್ನು ಬೆಂಬಲಿಸುತ್ತಿರುವ ಜನರು ಪಕ್ಷವನ್ನು ಸೇರಲು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದಾರೆ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಕ್ಷೇತ್ರದಲ್ಲಿ ನೆಲ ಕಚ್ಚಲಿದೆ ಎಂದು ಭವಿಷ್ಯ ನುಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ಕೆಜೆಪಿ ಧುರೀಣರಾದ ಮುರಿಗೆಪ್ಪ ಶೆಟ್ಟರ್, ಮಲ್ಲೇಶ ಬಣಕಾರ, ಗಂಗಣ್ಣ ಎಲಿ, ಸುರೇಶ ಯತ್ನಳ್ಳಿ, ರವೀಂದ್ರ ಪಟ್ಟಣಶೆಟ್ಟಿ, ಬಸವರಾಜ ಛತ್ರದ, ಪ್ರಶಾಂತ್ ಯಾದವಾಡ, ಇನ್ನಿತರರು ಉಪಸ್ಥಿತರಿದ್ದರು.