ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಂಹಿತೆ ಕಡ್ಡಾಯ ಪಾಲಿಸಿ

Lingaraj Badiger
Updated On : 17 Apr 2013, 12:59 pm

ಕನ್ನಡಪ್ರಭ ವಾರ್ತೆ, ಗದಗ, ಏ. 16
ರಾಜ್ಯದಲ್ಲಿ ಮೇ 5ರಂದು ನಡೆಯಲಿರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಚುನಾವಣಾ ಆಯೋಗದ ನೀತಿ-ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಹೇಳಿದರು.
ಅವರು ಸೋಮವಾರ ಜಿಲ್ಲಾಡಳಿತ ಭವನದ ಎನ್‌ಐಸಿ ಕಚೇರಿಯಲ್ಲಿ ಏರ್ಪಡಿಸಿದ್ದ ರಾಜಕೀಯ ಪಕ್ಷಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚುನಾವಣಾ ಆಯೋಗ ನಿರ್ದೇಶಿಸಿರುವಂತೆ ಪ್ರಸಕ್ತ ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿ ಗರಿಷ್ಠ ರು. 16 ಲಕ್ಷದ ವರೆಗೆ ಹಣ ವ್ಯಯಿಸಬಹುದು. ಚುನಾವಣಾ ಕಾರ್ಯಕ್ರಮಗಳ ಖರ್ಚು-ವೆಚ್ಚಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು. ಅದರ ವಿವರಗಳನ್ನು ಜಿಲ್ಲಾ ಚುನಾವಣಾ ಲೆಕ್ಕಪತ್ರ ಸಮಿತಿಗೆ ಚುನಾವಣಾ ದಿನಾಂಕದೊಳಗಾಗಿ 3 ಬಾರಿ ಪರಿಶೀಲನೆಗೆ ಒಪ್ಪಿಸಬೇಕು. ಪ್ರತಿ ಅಭ್ಯರ್ಥಿಯೂ ಪ್ರತ್ಯೇಕ ಬ್ಯಾಂಕ್ ಖಾತೆ ಹೊಂದಿ, ಎಲ್ಲ ಚುನಾವಣಾ ಖರ್ಚುಗಳನ್ನು ಅದರ ಮೂಲಕವೇ ನಿರ್ವಹಿಸಬೇಕು. ಅಂತಿಮವಾಗಿ ತಮ್ಮ ಲೆಕ್ಕಪತ್ರಗಳನ್ನು ಫಲಿತಾಂಶ ಪ್ರಕಟವಾದ ಮೇಲೆ ಲೆಕ್ಕಪತ್ರ ಸಮಿತಿಗೆ ಒಪ್ಪಿಸಬೇಕು.
ಚುನಾವಣೆ ಪ್ರಚಾರದ ವೇಳೆ ಯಾವುದೇ ಅಭ್ಯರ್ಥಿ ಅನ್ಯ ಪಕ್ಷಗಳ ಅಭ್ಯರ್ಥಿಗಳು ಅಥವಾ ವ್ಯಕ್ತಿಗಳ ವಿರುದ್ಧ ನಿಂದನಾತ್ಮಕ, ವಿವಾದಾತ್ಮಕ ಹೇಳಿಕೆ ನೀಡುವುದು, ತೇಜೋವಧೆ ಮಾಡುವುದು, ದೂಷಿಸುವುದು ಸೂಕ್ತವಲ್ಲ. ಪ್ರಚಾರ ಸಕ್ಥಳದ ಮಾಲೀಕರು ಅಥವಾ ಮುಖ್ಯಸ್ಥರಿಂದ ಪೂರ್ವಾನುಮತಿ ಪಡೆಯಬೇಕು.
ಧ್ವನಿವರ್ಧಕ ಬಳಸುವ ಬಗ್ಗೆ ಮತಕ್ಷೇತ್ರದ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯಬೇಕು. ಕರಪತ್ರ ಮುಂತಾದ ಪ್ರಚಾರ ಸಾಮಗ್ರಿಗಳಲ್ಲಿ ಮುದ್ರಕರ ವಿಳಾಸ ಮತ್ತಿತರ ವಿವರಗಳನ್ನು ಕಡ್ಡಾಯವಾಗಿ ನಮೂದಿಸುವಂತೆತಿಳಿಸಿದರು. ಸಭೆಯ ಅನಂತರ ಮತಗಟ್ಟೆಗಳನ್ನು ವಿತರಿಸುವ, ಅವುಗಳನ್ನು ಬಳಸುವ ವಿಧಾನಗಳ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ನಾಗರಾಜ, ನಗರಾಭಿವೃದ್ಧಿ ಆಯುಕ್ತ ರಮೇಶ ದೇಸಾಯಿ, ರೋಣ ತಹಸೀಲ್ದಾರ್ ಎಂ.ಬಿ. ಪಾಟೀಲ, ವಿವಿಧ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement