ಅಪಘಾತ: ಓರ್ವ ಸಾವು
ರೋಣ: ಬೊಲೆರೋ ಗೂಡ್ಸ್ ವಾಹನ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲಿಯೇ ಬೈಕ್ ಸವಾರ ಸಾವನ್ನಪ್ಪಿದ್ದು, ಓರ್ವನಿಗೆ ತೀವ್ರ ಸ್ವರೂಪದ ಗಾಯವಾಗಿರುವ ಘಟನೆಯು ತಾಲೂಕಿನ ಬೆಳವಣಕಿ ಗ್ರಾಮದ ವಡ್ಡರ ಕೆರೆಯ ಹತ್ತಿರ ಸಂಭವಿಸಿದೆ. ಬೋಲೆರೋ ಗೂಡ್ಸ್ ವಾಹನವು ರೋಣದಿಂದ ನವಲಗುಂದದತ್ತ ಹೊರಟಿತ್ತು. ಬೈಕ್ ರೋಣ ಪಟ್ಟಣಕ್ಕೆ ಬರುತ್ತಿದ್ದ ವೇಳೆಯಲ್ಲಿ ಈ ಘಟನೆ ಸಂಭವಿಸಿದೆ. ಸಾವನ್ನಪ್ಪಿದ ವ್ಯಕ್ತಿ ರೋಣ ಪಟ್ಟಣದ ಕುಮಾರ ಶಂಕ್ರಪ್ಪ ಕರಿಲಿಂಗಣ್ಣವರ (32) ಎಂದು ಗುರುತಿಸಲಾಗಿದೆ. ಬೈಕ್‌ನಲ್ಲಿದ್ದ ಇನ್ನೊಬ್ಬ ರೋಣ ಪಟ್ಟಣದ ವಿಜಯೇಂದ್ರ ಗಡಗಿ ಎಂಬುವರಿಗೆ ಗಾಯವಾಗಿದ್ದು, ಇವರನ್ನು ಪಟ್ಟಣದ ಡಾ. ಭೀಮಸೇನ ಜೋಶಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೂಡ್ಸ್ ವಾಹನ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಸಿಪಿಐ ಮಲ್ಲನಗೌಡ ನಾಯಕ, ಪಿಎಸ್‌ಐ ಎಂ.ಎನ್. ಹತ್ತಿಕಟಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವರ್ತೂರು ರಮಾನಂದ ಪಕ್ಷೇತರರಾಗಿ ಕಣಕ್ಕೆ
ನರಗುಂದ: ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯದ ಕೋಲಾರ ಜಿಲ್ಲೆಯ ಸಚಿವ ವರ್ತೂರು ಪ್ರಕಾಶರ ಸಹೋದರ ವರ್ತೂರು ರಮಾನಂದ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಬುಧವಾರ ಮತಕ್ಷೇತ್ರದಲ್ಲಿನ ನೂರಾರು ಬೆಂಬಲಿಗರ ಮೂಲಕ ಪಟ್ಟಣದ ವಿವಿಧ ಬೀದಿಗಳಲ್ಲಿ ಡೊಳ್ಳು ಮೆರವಣೆಗೆ ಮೂಲಕ ಮಿನಿವಿಧಾನ ಸಭೆಗೆ ತೆರಳಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
--