ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಭಿವೃದ್ಧಿಗೆ ನಮ್ಮನೆಯವ್ರುಗೆಲ್ಲಬೇಕ್ರಿ..

Lingaraj Badiger
Updated On : 18 Apr 2013, 11:46 am

ಕನ್ನಡಪ್ರಭ ವಾರ್ತೆ, ಗದಗ, ಏ. 17
ಕ್ಷೇತ್ರದ ಸಮಗ್ರ ಅಭಿವೃದ್ಧಿಯಾಗಬೇಕಾದಲ್ಲಿ ನಮ್ಮ ಮನೆಯವ್ರು ಗೆಲ್ಲಬೇಕ್ರೀ... ಅದಕ್ಕಾಗಿಯೇ ನಾನು ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದೇನೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಕಳಕಪ್ಪ ಬಂಡಿ ಅವರ ಪತ್ನಿ ಸಂಯುಕ್ತಾ ಬಂಡಿ ಹೇಳಿದರು.
ಅವರು ವಿಧಾನಸಭಾ ಚುನಾವಣೆ ಕುರಿತು 'ಕನ್ನಡಪ್ರಭ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು.
ರೋಣ ಕ್ಷೇತ್ರದಲ್ಲಿ ಕಳೆದ 9 ವರ್ಷಗಳಿಂದ ಹಲವಾರು ಜನಪರ, ಅಭಿವೃದ್ಧಿ ಯೋಜನೆಗಳು ಜಾರಿಯಾಗಿವೆ. ಇದರ ಆಧಾರದಲ್ಲಿಯೇ ನಾವು ಈ ಬಾರಿಯ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಕ್ಷೇತ್ರದಾದ್ಯಂತ ಮಹಿಳಾ ಸಂಘಟನೆಯನ್ನು ಹಾಗೂ ಅವರಿಗೆ ಹಲವಾರು ಸ್ವಂಯ ಉದ್ಯೋಗದ ಯೋಜನೆಗಳನ್ನು ಕೊಡುಗೆಯಾಗಿ ನೀಡಿದ್ದೇನೆ. ನಮ್ಮ ಮನೆಯವ್ರು ಹಾಗೂ ಬಿಜೆಪಿ ಸರ್ಕಾರ ಮಾಡಿದ ಹಲವಾರು ಜನಪರ ಕಾರ್ಯಕ್ರಮಗಳನ್ನು ನಾವು ಯಶಸ್ವಿಯಾಗಿ ಜನರಿಗೆ ಮುಟ್ಟಿಸುವಂತ ಕಾರ್ಯಮಾಡುತ್ತಿದ್ದೇವೆ ಎಂದರು.
ನಿಮ್ಮ ಯಶಸ್ವಿ ಪಾದಯಾತ್ರೆಯ ಗುಟ್ಟೇನು?
ಇದರಲ್ಲಿ ಯಾವುದೇ ರೀತಿಯ ಗುಟ್ಟಿಲ್ಲ. ನಾನು ಮಹಿಳಾ ಸಂಘಟನೆಯಲ್ಲಿ ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ಮಹಿಳೆಯರು ನನ್ನೊಂದಿಗೆ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನಾವು ಅವರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಮೂಲಕ ಅವರು ಆರ್ಥಿಕ ಸ್ವಾವಲಂಬಿಗಳಾಗುವಂತೆ ಮಾಡಿದ್ದು, ಇದು ನಮಗೆ ಇಂದು ಶ್ರೀರಕ್ಷೆಯಾಗಿದೆ. ಪ್ರತಿ ಗ್ರಾಮ ಮತ್ತು ಪಟ್ಟಣಗಳಲ್ಲಿನ ಮಹಿಳೆಯರು ಬಿಜೆಪಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಹಲವಾರು ವರ್ಷದ ಮಹಿಳಾ ಸಂಘಟನೆಯೇ ನನ್ನ ಯಶಸ್ಸಿನ ಗುಟ್ಟಾಗಿದೆ.
ನೀವೇ ಪ್ರಚಾರ ಮಾಡಲು ಕಾರಣವೇನು? ಕಳಕಪ್ಪ ಬಂಡಿಯವರು ಹೋದರೆ ಜನ ಮತ ಹಾಕಲ್ವಾ?
ನನಗಿಂತ ಹೆಚ್ಚು ಹೊತ್ತು ಪ್ರಚಾರ ಮಾಡುತ್ತಿರುವವರೇ ಅವರು. ಆದರೆ, ಅವರು ಹೋದಲೆಲ್ಲ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಅವರನ್ನು ಆವರಿಸಿಕೊಂಡು ಮಾತನಾಡಲು ಬಿಡದಷ್ಟು ರೀತಿಯಲ್ಲಿ ಸ್ವಾಗತಿಸುತ್ತಿದ್ದಾರೆ. ಹಾಗಾಗಿ ಅವರು ಮಹಿಳಾ ಮತದಾರರನ್ನು ತಲುಪಲು ಸಾಧ್ಯವಾಗದೇ ಇರಬಹುದು ಎನ್ನುವ ದೃಷ್ಟಿಕೋನದಿಂದ ಮತ್ತು ನಾನು ಇಲ್ಲಿಯವರೆಗೂ ಮಾಡಿಕೊಂಡು ಬಂದಿರುವ ಮಹಿಳಾ ಸಂಘಟನೆಗಳ ಒತ್ತಾಯದ ಮೇರೆಗೆ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ರೋಣ ಕ್ಷೇತ್ರವು ಇನ್ನಷ್ಟು ಅಭಿವೃದ್ಧಿಯಾಗಬೇಕಾದಲ್ಲಿ ಬಿಜೆಪಿ ಗೆಲ್ಲಬೇಕು ಎನ್ನುವುದು ನನ್ನ ಇಚ್ಚೆಯಾಗಿದೆ.
ಕ್ಷೇತ್ರದ ಕಾರ್ಯಕರ್ತರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ರೋಣ ಕ್ಷೇತ್ರದಲ್ಲಿನ ಕಾರ್ಯಕರ್ತರು ಅತ್ಯಂತ ನಿಷ್ಠುರ ಹಾಗೂ ಪಕ್ಷಕ್ಕಾಗಿ ಏನೆಲ್ಲ ತ್ಯಾಗ ಮಾಡುವಂತವರಾಗಿದ್ದಾರೆ. ಅವರ ಶ್ರಮದಿಂದಲೇ ಇವ್ರು 2 ಬಾರಿ ಶಾಸಕರಾಗಿದ್ದಾರೆ. ಇವರು ಸಚಿವರಾದ ನಂತರ ಹೆಚ್ಚಿನ ಸಮಯವನ್ನು ಬೆಂಗಳೂರಿನಲ್ಲಿ ಇಲಾಖೆಯ ಅಭಿವೃದ್ಧಿಗೆ ಆದ್ಯತೆ ನೀಡಿದ ವೇಳೆಯಲ್ಲಿ ಮನೆಗೆ ಬರುವ ಪ್ರತಿಯೊಬ್ಬ ಕಾರ್ಯಕರ್ತರ ಅಹವಾಲುಗಳು ಮತ್ತು ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಒಬ್ಬ ಜವಾಬ್ದಾರಿಯುತ ಮಹಿಳೆಯಾಗಿ ಅದನ್ನು ಸಮರ್ಥವಾಗಿ ನಿಭಾಯಿಸಿದ ಸಂತಸ ನನಗಿದೆ. ಇದಕ್ಕೆ ಕಾರ್ಯಕರ್ತರಿಂದಲೂ ಉತ್ತಮ ಅಭಿಪ್ರಾಯವಿದೆ.
ಸಚಿವರ ಕಾರ್ಯ ವೈಖರಿ ಬಗ್ಗೆ ನಿಮ್ಮ ಅನಿಸಿಕೆ?
ಜನತೆ ನೀಡಿದ ಆಶೀರ್ವಾದಿಂದ ಅಧಿಕಾರ ಅವರಿಗೆದೊರೆತಿದ್ದು, ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರು ತಮ್ಮ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ. ಕ್ಷೇತ್ರದಲ್ಲಿನ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರಿ ಪ್ರೌಢಶಾಲೆ, ಪಾಲಿಟೆಕ್ನಿಕ್ ಕಾಲೇಜು. ವಿವಿಧೆಡೆ ಪದವಿಪೂರ್ವ ಹಾಗೂ ಹೊಸ ಪದವಿ ಕಾಲೇಜುಗಳ ಸ್ಥಾಪನೆ ಮಾತ್ರವಲ್ಲ, ಅವುಗಳಿಗೆ ಬೇಕಾಗುವ ಅಗತ್ಯ ಕಟ್ಟಡಗಳ ನಿರ್ಮಾಣದ ವಿಷಯದಲ್ಲಿ ಕ್ಷೇತ್ರದ ಇತಿಹಾಸದಲ್ಲಿಯೇ ದೊಡ್ಡ ದಾಖಲೆ ನಿರ್ಮಿಸಿದ್ದಾರೆ. ಅವರು ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳ ಮೂಲಕ ಕ್ಷೇತ್ರವನ್ನು ಮಾದರಿಯಾಗಿ ರೂಪಿಸಬೇಕಿದೆ. ಅದಕ್ಕಾಗಿಯೇ ನಾನು ಜನತೆಯಲ್ಲಿ ಬೇಡಿಕೊಳ್ಳುವುದೇನೆಂದರೆ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು.
ನೀವು ಪ್ರತಿ ಮನೆಗೂ ತೆರಳಿ ಪ್ರಚಾರ ಮಾಡುವ ಉದ್ದೇಶವೇನು?
ಜನತೆ ನಮ್ಮ ಮೇಲೆ ಸಾಕಷ್ಟು ವಿಶ್ವಾಸ ಹೊಂದಿದ್ದಾರೆ. ಹಾಗಾಗಿ ಒಂದು ಓಣಿಗೆ ತೆರಳಿ ಅಲ್ಲಿನ ದೇವಸ್ಥಾನದಲ್ಲಿ ಕುಳಿತು ಬರುವುದರಿಂದ ಜನರಿಗೆ ನೋವಾಗುತ್ತದೆ. ಪ್ರತಿಯೊಬ್ಬರೂ ಸಂಯುಕ್ತಾ ಬಂಡಿ ನಮ್ಮ ಮನೆಗೆ ಬರಬೇಕು ಎಂದು ಬಯಸುತ್ತಾರೆ. ಅವರ ಆಸೆಯನ್ನು ಈಡೇರಿಸುವುದಕ್ಕಾಗಿಯೇ ನಾನು ಎಷ್ಟೇ ತೊಂದರೆಯಾದರೂ ಕ್ಷೇತ್ರದಲ್ಲಿನ ಪ್ರತಿಯೊಂದು ಮನೆ ಮನೆಗೂ ತೆರಳಿ ಎಲ್ಲರನ್ನೂ ಭೇಟಿ ಮಾಡಿ, ಮತ ನೀಡುವಂತೆ ವಿನಂತಿಸುತ್ತಿದ್ದೇನೆ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ.
ಚುನಾವಣಾ ಒತ್ತಡದಲ್ಲಿ ಸಚಿವರು ನಿಮ್ಮ ಮೇಲೆ ಯಾವಾಗಲಾದರೂ ರೇಗಿದ್ದಾರೆಯೇ?
ಹ...ಹ...ಹ... ರೇಗುವುದೆಲ್ಲಿಂದಾ ಬಂತು... ಚುನಾವಣೆ ಘೋಷಣೆಯಾದಾಗಿನಿಂದ ಅವರಿಗೆ ನನಗೆ ಭೇಟಿಯೇ ಆಗುತ್ತಿಲ್ಲ. ನಾನು ಬೆಳಗ್ಗೆ ಪ್ರಚಾರಕ್ಕೆ ತೆರಳುವ ವೇಳೆಯಲ್ಲಿ ಸಚಿವರು ವಿಶ್ರಾಂತಿ ಪಡೆಯುತ್ತಿರುತ್ತಾರೆ. ನಾನು ಮರಳಿ ಮನೆಗೆ ಬರುವ ವೇಳೆಯಲ್ಲಿ ಅವರು ಪ್ರಚಾರ ಕಾರ್ಯದಲ್ಲಿರುತ್ತಾರೆ. ಹಾಗಾಗಿ ರೇಗುವ ಪ್ರಶ್ನೆಯೇ ಬಂದಿಲ್ಲ. ನಾವೆಲ್ಲ ಕುಟುಂಬದ ಸದಸ್ಯರು ಚುನಾವಣಾ ಕಾರ್ಯದಲ್ಲಿ ಮಗ್ನರಾಗಿರುವುದರಿಂದ ಇಂತಹ ಸಂದರ್ಭಗಳೇ ಉದ್ಭವಿಸುವುದಿಲ್ಲ ಎನ್ನುತ್ತಿದ್ದಂತೆ ಅಲ್ಲಿದ್ದವರೆಲ್ಲರೂ ನಗೆಗಡಲಲ್ಲಿ ತೇಲಾಡಿದರು.
- ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement