ಜ್ಞಾನಾಭಿವೃದ್ಧಿಗೆ ಪುಸ್ತಕ, ಪತ್ರಿಕೆ ಅವಶ್ಯ
ಕನ್ನಡಪ್ರಭ ವಾರ್ತೆ, ನರೇಗಲ್ಲ, ಏ. 17
ಪ್ರಪಂಚದ ಜ್ಞಾನವನ್ನು ಅರಿತು ಕೊಳ್ಳಲು ಪುಸ್ತಕ ಹಾಗೂ ಪತ್ರಿಕೆಯ ಅತ್ಯವಶ್ಯವಾಗಿ ಬೇಕೆ ಬೇಕು. ಅಂತಹ ಪುಸ್ತಕ ಹಾಗೂ ಪತ್ರಿಕೆಗಳನ್ನು ನಾಗರಿಕರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಇಂದು ಇಲ್ಲಿ ವಾಚನಾಲಯ ಉದ್ಘಾಟಿಸಲಾಗುತ್ತಿದೆ ಎಂದು ಸ್ಥಳಿಯ ಹಿರಿಯ ನಾಗರಿಕ ವೆಂಕಣ್ಣ ಕುಲಕರ್ಣಿ ಹೇಳಿದರು. ಈಚೆಗೆ ಅವರು ಸ್ಥಳೀಯ ದಿ. ಶಂಕರಭಟ್ಟರ ಸ್ಮರಣಾರ್ಥ ದ್ಯಾಮವ್ವನ ಗುಡಿ ಓಣಿಯ ಯುವಕರಿಂದ ಪ್ರಾರಂಭಿಸಲಾದ ಗುರು ಶಂಕರ ವಾಚನಾಲಯವನ್ನು ಉದ್ಘಾಟಿಸಿ ಮಾತನಾಡಿ, ಯುವಕರಲ್ಲಿ ವಾಕ್ ಚಾತುರ್ಯ ಹಾಗೂ ನಾಯಕತ್ವ ಗುಣಗಳು ಬರಬೇಕಾದರೆ ಪತ್ರಿಕೆ ಹಾಗೂ ಪುಸ್ತಕಗಳು ಅತ್ಯವಶ್ಯ. ಇದರಿಂದ ಮನುಷ್ಯನ ಮನೋಸ್ಥೈರ್ಯ ವೃದ್ಧಿಸಲು ಸಾಧ್ಯ ಎಂದರು.
ಇಂದು ಪ್ರಾರಂಭಿಸಲಾದ ವಾಚನಾಲಯ ನಿರಂತರನಾಗಿ ನಡೆದು ಯುವ ಪೀಳಿಗೆಯನ್ನು ಹೊಸ ಜಗತ್ತಿನತ್ತ ಕೊಂಡೊಯ್ಯಬೇಕಾದ ಅನಿವಾರ್ಯತೆಯಿದೆ. ಇದಕ್ಕೆ ಇಲ್ಲಿರುವ ಯುವಕರ ಸಂಘಟನೆ ಅವಶ್ಯಕವಾಗಿದ್ದು, ಮುಂದಿನ ದಿನಮಾನಗಳಲ್ಲಿ ಭಿನ್ನಾಭಿಪ್ರಾಯಗಳು ತಲೆದೋರದಂತೆ ಮುನ್ನಡೆಸಿಕೊಂಡು ಹೋಗುವಂತೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವನಗೌಡ ಪಾಟೀಲ ಪ್ರಾಸ್ಥಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಶೇಖಣ್ಣ ಲಕ್ಕನಗೌಡ್ರ, ಕಳಕಪ್ಪ ಧರ್ಮಾಯತ, ಚಂದ್ರು ಧರ್ಮಾಯತ, ಶಶಿಧರ ಕಳಕೊಣ್ಣವರ, ಬಸವರಾಜ ಲಕ್ಕನಗೌಡ್ರ ಉಪಸ್ಥಿತರಿದ್ದರು.