ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನಾಮಪತ್ರ ತಿರಸ್ಕಾರ: ಪ್ರತಿಭಟನೆ

Lingaraj Badiger
Updated On : 18 Apr 2013, 11:50 am

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಏ. 17
ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಬುಧವಾರ ನಿಗದಿತ ವೇಳೆಗೆ ಆಗಮಿಸಿ ನಾಮಪತ್ರ ಸಲ್ಲಿಸಲು ಬಂದಿದ್ದ ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿ ಟಿ. ದಿನೇಶ ಹಾಗೂ ಸಹಾಯಕ ಚುನಾವಣಾ ಅಧಿಕಾರಿ ಆರ್.ಡಿ. ಉಪ್ಪಿನ ಸರಿಯಾಗಿ ಸ್ಪಂದಿಸದೇ, ವೇಳೆ ಮೀರಿ ಬಂದಿರುವುದರಿಂದ ನಾಮಪತ್ರ ಸ್ವೀಕರಿಸಲು ಸಾಧ್ಯವಿಲ್ಲವೆಂದು ಹೇಳಿ, ಪೊಲೀಸರ ಮುಖಾಂತರ ಹೊರ ಹಾಕಿಸಿ, ಅವಮಾನ ಮಾಡಿರುವ ಘಟನೆ ಖಂಡಿಸಿ ಕಾರ್ಯಾಲಯದೆದುರು ಪ್ರತಿಭಟನೆ ನಡೆಸಲಾಯಿತು.
2.45ಕ್ಕೆ ಚುನಾವಣಾ ಕಾರ್ಯಾಲಯದೊಳಗೆ ಇದ್ದರೂ ಸಮಯವನ್ನು ನೋಡದೇ, ಯಾವುದೇ ದಾಖಲೆಗಳನ್ನು ಪರಿಶೀಲನೆ ಮಾಡದೇ ಇರುವ ಅಧಿಕಾರಿಗಳ ಕ್ರಮಕ್ಕೆ ಸಿಡಿಮಿಡಿಗೊಂಡ ಪಕ್ಷೇತರ ಅಭ್ಯರ್ಥಿಗಳಾದ ಗೀತಾ ಕೃಷ್ಣಾ ನಾಯಕ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಅಧಿಕೃತ ಅಭ್ಯರ್ಥಿ ವಿ.ಗಣೇಶ ವಡ್ಡರ, ಕೃಷ್ಣಾ ನಾಯಕ, ಕುಬೇರಪ್ಪ ಪೂಜಾರ ಇವರು ಚುನಾವಣಾ ಅಧಿಕಾರಿಗಳನ್ನು ಪ್ರಶ್ನಿಸಿ, ಉದ್ದೇಶ ಪೂರ್ವಕವಾಗಿಯೇ ತಮ್ಮ ನಾಮಪತ್ರ ಸ್ವೀಕರಿಸುತ್ತಿಲ್ಲ. ಇದರ ಹಿಂದೆ ರಾಜಕೀಯ ಕೈವಾಡವಿದೆ ಎಂದು ಆರೋಪಿಸಿದರು. ನ್ಯಾಯ ಸಿಗುವವರೆಗೂ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ತಮಗಾಗಿರುವ ಅನ್ಯಾಯದ ಕುರಿತು ಜಿಲ್ಲಾ ಚುನಾವಣಾಧಿಕಾರಿಗಳ ಗಮನಕ್ಕೂ ತಂದಿದ್ದು ಅವರು ಸ್ಪಂದಿಸಿಲ್ಲ. ತಾವು ವೇಳೆಗೆ ಸರಿಯಾಗಿ ಬಂದಿಲ್ಲ ಎಂದು ಹೇಳುವ ಅಧಿಕಾರಿಗಳಿಗೆ ತಹಸೀಲ್ದಾರ್ ಕಾರ್ಯಾಲಯದಲ್ಲಿ ನಡೆದಿರುವ ವಿದ್ಯಮಾನಗಳ ಕುರಿತು ಸಿಡಿ ಮತ್ತು ಪೋಟೋ ಗ್ರಾಫಿ ನೀಡುವಂತೆಯೂ ಒತ್ತಾಯ ಪಡಿಸಿದ್ದು, ತಮ್ಮ ನಾಮಪತ್ರ ತಿರಸ್ಕರಿಸಿದ ಅಧಿಕಾರಿಗಳ ಧೋರಣೆ ವಿರುದ್ಧ ಕಿಡಿ ಕಾರಿರುವ ಅವರು, ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ಚುನಾವಣೆ ರದ್ದು ಪಡಿಸುವಂತೆ ಒತ್ತಾಯಿಸಿದ್ದಾರೆ.
ಜನಸಾಮಾನ್ಯರಿಗೆ ನ್ಯಾಯ ಒದಗಿಸದ ಚುನಾವಣಾ ಅಧಿಕಾರಿಗಳ ವಿರುದ್ದ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕು. ಶೀಘ್ರ ಪರಿಶೀಲನೆ ನಡೆಸಿ ನ್ಯಾಯ ಒದಗಿಸಿ ಕೊಡಬೇಕು. ಇಲ್ಲವಾದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement