ನಿರ್ಭಯವಾಗಿ ಮತ ಚಲಾಯಿಸಿ: ಬೀಳಗಿ
ಗಜೇಂದ್ರಗಡ: ನಿರ್ಭಯವಾಗಿ ಮತ ಚಲಾಯಿಸುವ ಮೂಲಕ ಮತದಾರರು ಪ್ರಜಾಪ್ರಭುತ್ವದ ಯಶಸ್ಸಿಗೆ ಸಹಕರಿಸಿ ಜತೆಗೆ ಮತದಾರರ ಜಾಗೃತಿ ಜಾಥಾಕ್ಕೆ ಯುವ ಸಂಘಟನೆಗಳು ಕೈಜೋಡಿಸಿ ಎಂದು ಪುರಸಭಾ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಕರೆ ನೀಡಿದರು.
ಅವರು ಬುಧವಾರ ಸ್ಥಳೀಯ ಪುರಸಭೆ ಆವರಣದಲ್ಲಿ ಮತದಾನದ ಕುರಿತು ನಡೆದ ಜಾಗೃತಿ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ಸಂವಿಧಾನದ ಹಕ್ಕುಗಳಲ್ಲಿ ಮತದಾನದ ಹಕ್ಕು ಅತ್ಯಂತ ಪ್ರಾಮುಖ್ಯವಾದದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬ ನೊಂದಾಯಿತ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವದ ಯಶಸ್ವಿಗೆ ಮತದಾನ ಮಾಡುವುದು ಕಡ್ಡಾಯವಾಗಿದೆ. ಮೇ 5ರಂದು ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಮತ ಚಲಾಯಿಸುವ ಮೂಲಕ ಮತದಾನದ ಮಹತ್ವಕ್ಕೆ ಮೆರಗು ನೀಡಿ ದೇಶದ ಸಾರ್ವಭೌಮತ್ವ ಎತ್ತಿ ಹಿಡಿಯಿರಿ ಎಂದರು.
ವಿಶೇಷ ತಹಶೀಲ್ದಾರ ಸಿ.ಎಂ. ಕಲಹಾಳ ಮಾತನಾಡಿ, 18 ವರ್ಷ ಮೇಲ್ಪಟ್ಟ ದೇಶದ ಪ್ರತಿಯೊಬ್ಬ ಪ್ರಜೆಯು ಮತದಾನದಲ್ಲಿ ಪಾಲ್ಗೊಳ್ಳುವುದು ಅವಶ್ಯ. ಈ ದೆಸೆಯಲ್ಲಿ ಮತದಾನದ ಮಹತ್ವ ಕುರಿತು ಜತೆಗೆ ಜಾಗೃತಿ ಮೂಡಿಸಲು ಏ. 17ರಿಂದ ಜಿಲ್ಲೆಯ ಎಲ್ಲ ತಾಪಂ, ಗ್ರಾಪಂ ಸೇರಿದಂತೆ ನಗರ ಪಟ್ಟಣ ಪ್ರದೇಶಗಳಲ್ಲಿಯೂ ಜಾಗೃತಿ ರ್ಯಾಲಿಯು ಆರಂಭಗೊಂಡ ಹಿನ್ನೆಲೆಯಲ್ಲಿ ಪಟ್ಟಣದ ಜನತೆಗೆ ಮತದಾನದ ಆವಶ್ಯಕತೆ ಕುರಿತು ಅರಿವು ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಪ್ರತಿಯೊಬ್ಬರೂ ಮತದಾನದಿಂದ ದೂರ ಉಳಿಯದೆ ಮತ ಚಲಾಯಿಸಿ ನಿಮ್ಮ ಪವಿತ್ರ ಹಕ್ಕಿಗೆ ಜೀವ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು. ಉಪನೋಂದಣಾಧಿಕಾರಿ ಎಂ.ಬಿ. ದುಮ್ಮಾಳ, ಪುರಸಭೆ ಆಡಳಿತಾಧಿಕಾರಿ ಐ.ಜಿ. ಗದ್ಯಾಳ ಮಾತನಾಡಿದರು. ಬಳಿಕ ಮತದಾರ ಜಾಗೃತಿ ರ್ಯಾಲಿಯು ವಿವಿಧ ಅಣುಕು ಗೀತೆಗಳ ಸಾರದೊಂದಿಗೆ ಪಟ್ಟಣದ ವಿವಿಧ ಬಡಾವಣೆಯಲ್ಲಿ ಸಂಚರಿಸಿತು. ಆರೋಗ್ಯ ಇಲಾಖೆಯ ಎಂ.ಬಿ. ಗಡ್ಡಿ, ಮಹೇಶ ನಿಡಶೇಶಿ, ಪಿ.ಎನ್. ದೊಡ್ಡಮನಿ, ಎಂ.ಬಿ. ಒಂಟಿ, ಬಿ.ಜಿ. ಇಂಡಿ, ಬಸವರಾಜ ಬಳಗಾನೂರ, ಪಿ.ಡಿ. ದೊಡ್ಡಮನಿ, ಜಿ.ಎನ್. ಕಾಳೆ, ಎನ್.ಬಿ. ಬೇಲೇರಿ, ಹೇಮಾ ಮಾದಗುಂಡಿ, ಉಮಾ ಕುರಹಟ್ಟಿ ಮುಂತಾದವರು ಇದ್ದರು.