ಅಗ್ನಿ ಅನಾಹುತ ನಡೆಯದಂತೆ ಎಚ್ಚರಿಕೆ ವಹಿಸಿ: ನಾಯಕ
ಕನ್ನಡಪ್ರಭ ವಾರ್ತೆ, ಮುಂಡರಗಿ, ಏ. 18
ಮನೆಯಲ್ಲಿ ಅಡಿಗೆ ಮಾಡುವಾಗ ಎಲ್ಪಿಜಿ ಸ್ಟೋವ್ಅನ್ನು ಯಾವಾಗಲೂ ಸಿಲಿಂಡರ್ಗಿಂತ ಎತ್ತರವಾದ ಸ್ಥಳದಲ್ಲಿಟ್ಟು ಅಡುಗೆ ಮಾಡಬೇಕು. ಒಂದು ವೇಳೆ ಅಡಿಗೆ ಸಿಲಿಂಡರ್ಗೆ ಬೆಂಕಿ ಹತ್ತಿದರೆ ಕೂಡಲೇ ಒದ್ದೆ ಬಟ್ಟೆ ಅಥವಾ ನೀರಲ್ಲಿ ಎದ್ದಿದ ಗೋಣಿ ಚೀಲವನ್ನು ಹಾಕಿರಿ ಎಂದು ಅಗ್ನಿಶಾಮಕ ಅಧಿಕಾರಿ ಎಸ್.ಯು. ನಾಯಕ ಹೇಳಿದರು.
ಅವರು ಗುರುವಾರ ಸ್ಥಳೀಯ ಸರ್ಕಾರಿ ಹಿರಿಯ ಕೋಟೆ ಪ್ರಾಥಮಿಕ ಶಾಲೆಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ತಾಲೂಕು ಘಟಕ, ಸರ್ಕಾರಿ ಕೋಟೆ ಹಿರಿಯ ಪ್ರಾಥಮಿಕ ಶಾಲೆಯ ಕೋಟೆ ಮಕ್ಕಳ ಕೂಟ ಮತ್ತು ಸೃಷ್ಟಿ-ಪ್ರತಿಸೃಷ್ಟಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ ಇವುಗಳ ಆಶ್ರಯದಲ್ಲಿ ನಡೆಯುತ್ತಿರುವ ಚಿಗುರು ಚೇತನ ಮಕ್ಕಳ ಬೇಸಿಗೆ ಶಿಬಿರದಲ್ಲಿ ಮುಂಡರಗಿ ಅಗ್ನಿ ಶಾಮಕದಳವು ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಗ್ನಿಶಾಮಕ ದಿನಾಚರಣೆ ಸಪ್ತಾಹದ ಅಂಗವಾಗಿ ಮಕ್ಕಳಿಗೆ ಏರ್ಪಡಿಸಿದ್ದ ಬೆಂಕಿ ಆಕಸ್ಮಿಕದ ಬಗ್ಗೆ ತಿಳಿವಳಿಕೆ, ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಣ್ಣೆ ಪದಾರ್ಥಗಳಿಗೆ ಬೆಂಕಿ ತಗುಲಿದಾಗ ನೀರನ್ನು ಸುರಿದು ಆರಿಸಲು ಪ್ರಯತ್ನಿಸಿದರೆ ಬೆಂಕಿಯ ರಭಸ ಇನ್ನೂ ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಬೆಂಕಿಯನ್ನು ನಂದಿಸಲು ಪ್ರಾಥಮಿಕವಾಗಿ ಉಸುಕನ್ನು ಬಳಸಿ, ತಕ್ಷಣ ಅಗ್ನಿಶಾಮಕಕ್ಕೆ ತಿಳಿಸಬೇಕು. ಮನೆಗಳಲ್ಲಿ ಸೀಮೆ ಎಣ್ಣೆ ಮತ್ತು ಪೆಟ್ರೋಲ್ದಂತಹ ವಸ್ತುಗಳನ್ನು ಶೇಖರಿಸಿಡುವುದು ಅಪಾಯಕಾರಿ ಎಂದರು.
ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ಹತ್ತಿದಾಗ ಅದನ್ನು ಆರಿಸುವ ಕುರಿತು ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು. ಅಗ್ನಿಶಾಮಕ ಸಿಬ್ಬಂದಿ ಪಿ.ಡಿ. ಕಬ್ಬರಗಿ, ಎ.ಎಸ್. ನರ್ತಿ, ಎಸ್.ಎಂ. ಕುಂಬಾರ, ವಿ.ಎಫ್. ತಳವಾರ, ಡಿ.ಬಿ. ಮ್ಯಾಗೇರಿ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಎಸ್.ಎಸ್. ನಂಜನಗೂಡ ವಹಿಸಿದ್ದರು. ಎಸ್.ವಿ. ಅರಿಷಿಣದ, ಬಿ.ಆರ್. ಕಬ್ಬೇರ, ಶಿಬಿರದ ನಿರ್ದೇಶಕ ಡಾ. ನಿಂಗು ಸೊಲಗಿ, ವಿಶ್ವನಾಥ ಉಳ್ಳಾಗಡ್ಡಿ ಉಪಸ್ಥಿತರಿದ್ದರು.