ಅಧಿಕಾರಕ್ಕಾಗಿ ಕಚ್ಚಾಡಿದ ಬಿಜೆಪಿ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಏ. 18
ಕಾಂಗ್ರೆಸ್ ಪಕ್ಷ ಸದ್ಯದ ವಿಧಾನಸಭಾ ಚುನಾವಣೆಯಲ್ಲಿ ನಿಚ್ಚಳ ಬಹುಮತ ಗಳಿಸಲಿದೆ. ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೇ ಕೇವಲ ಅಧಿಕಾರಕ್ಕಾಗಿ ಕಚ್ಚಾಡುವುದರಲ್ಲೇ ಕಾಲಹರಣ ಮಾಡಿದೆ ಎಂದು ಶಿರಹಟ್ಟಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ನಡೆಸಿದ ಚುನಾವಣಾ ಪ್ರಚಾರದಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಉತ್ತಮ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಕುರ್ಚಿ ಆಸೆಗಾಗಿ ಕಿತ್ತಾಟ ನಡೆಸಿ ಅಭಿವೃದ್ಧಿ ಕಡೆಗಣಿಸಲಾಗಿದೆ. ಬರಗಾಲದಿಂದ ಜನ, ಜಾನುವಾರುಗಳು ತತ್ತರಿಸುತ್ತಿದ್ದಾರೆ. ಇವರಿಗೆ ಇವ್ಯಾವುದರ ಕಲ್ಪನೆ ಇಲ್ಲ. ಹಣಕ್ಕೊಸ್ಕರ ರಾಜ್ಯವನ್ನು ಲೂಟಿ ಮಾಡಿದವರಿಗೆ ಜನ ಮುಂಬರುವ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ಮಾಜಿ ಶಾಸಕ, ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ ಮಾತನಾಡಿ, ಬಿಜೆಪಿ ಸರ್ಕಾರವು ಜನರ ಮುಂದೆ ಯಾವ ನೈತಿಕತೆ ಇಟ್ಟುಕೊಂಡು ಮತ ಕೇಳ ಹೊರಟಿದೆ ಎನ್ನುವುದು ತಿಳಿಯಲಾರದ ಪ್ರಶ್ನೆಯಾಗಿದೆ. ಬಿಜೆಪಿ ಈಗ ಒಡೆದ ಮನೆಯಂತಾಗಿದೆ. ಅಧಿಕಾರ ದಾಹಕ್ಕಾಗಿ ಪಕ್ಷ ಕಟ್ಟಿದವರನ್ನೆ ಹೊರ ಹಾಕಿದವರು ಹೇಗೆ ಜನರಿಗೆ ಮುಖ ತೋರಿಸುತ್ತಾರೆ ಎಂದು ಪ್ರಶ್ನಿಸಿದರು.
ಚುನಾವಣಾ ಪ್ರಚಾರ ಕಾರ್ಯದಲ್ಲಿ ರಾಜ್ಯ ಎಸ್ಟಿ ಘಟಕದ ಅಧ್ಯಕ್ಷ ಟಿ. ಈಶ್ವರ, ತಾಪಂ ಸದಸ್ಯ ಚನ್ನಪ್ಪ ಜಗಲಿ, ಲಕ್ಷ್ಮೇಶ್ವರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಯು.ಎನ್. ಹೊಳಲಾಪುರ, ಪೀಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಸ್.ಪಿ. ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ವಿ.ಜಿ. ಪಡಗೇರಿ, ಅಡಿವೆಪ್ಪ ಬೆಟಗೇರಿ, ಬೆಂಬಲಿಗರು ಹಾಜರಿದ್ದರು.
--
ಬಣವೆಗೆ ಬೆಂಕಿ: ಅಪಾರ ಹಾನಿ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಏ. 18
ಪಟ್ಟಣದ ಸೊಪ್ಪಿನಕೇರಿ ಓಣಿಯಲ್ಲಿ ಎರಡು ಮೇವಿನ ಬಣವೆಗೆ ಬೆಂಕಿ ತಗುಲಿ ಸುಟ್ಟು ಕರಕಲಾದ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ. ಸೊಪ್ಪಿನಕೇರಿ ಓಣಿಯ ರೈತ ಚೆನ್ನಬಸಪ್ಪ ಅಣ್ಣಿಗೇರಿ ಅವರಿಗೆ ಸೇರಿದ 5 ಟ್ರ್ಯಾಕ್ಟರ್ ಮೇವು ಹಾಗೂ ಪ್ರಕಾಶ ಮುಳಗುಂದ ಎನ್ನುವವರಿಗೆ ಸೇರಿದ 8 ಟ್ರ್ಯಾಕ್ಟರ್ ಮೇವಿನ ಬಣವೆ ಸೇರಿದ್ದವೆಂದು ತಿಳಿದು ಬಂದಿದೆ. ಸುಮಾರು ರು. 75 ಸಾವಿರ ಮೌಲ್ಯದ ಮೇವು ಬೆಂಕಿಗೆ ಆಹುತಿಯಾಗಿದೆ. ಜಾನುವಾರುಗಳಿಗಾಗಿ ಶೇಖರಿಸಿಟ್ಟಿದ್ದ ಮೇವಿನ ಭಣವೆಗಳು ಆಕಸ್ಮಿಕವಾಗಿ ಸುಟ್ಟು ಕರಕಲಾದ ಘಟನೆ ಜರುಗಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪಟ್ಟಣದ ಅಗ್ನಿಶಾಮಕ ದಳದ ಅಧಿಕಾರಿ ಟಿ.ಪರುಶುರಾಮ ಹಾಗೂ ಸಿಬ್ಬಂದಿ ವರ್ಗವು ಸುಮಾರು 1 ಗಂಟೆಗಳವರೆಗೆ ಶ್ರಮಿಸಿ ಬೆಂಕಿನಂದಿಸುವ ಕಾರ್ಯದಲ್ಲಿ ಯಶಸ್ವಿಯಾದರು. ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದು ತಿಳಿದು ಬಂದಿಲ್ಲ. ಘಟನೆ ನಡೆದ ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಚಿಕ್ಕನಗೌಡರ ಆಗಮಿಸಿ ಹಾನಿಯ ಅಂದಾಜು ಮೊತ್ತ ತಿಳಿದುಕೊಂಡು ಮುಂದಿನ ಕ್ರಮಕ್ಕಾಗಿ ತಾಲೂಕಿನ ತಹಸೀಲ್ದಾರ್ಗೆ ಮಾಹಿತಿ ನೀಡುವುದಾಗಿ ಹೇಳಿದರು. ಇದಕ್ಕೂ ಮೊದಲು ಓಣಿಯ ನಾಗರಿಕರಾದ ನಾಗರಾಜ ಚಿಂಚಲಿ, ಸತೀಶ ಮೆಕ್ಕಿ, ವಿರುಪಾಕ್ಷಪ್ಪ ಹಂಪಣ್ಣವರ ಸೇರಿದಂತೆ ಅನೇಕರು ಬೆಂಕಿ ನಂದಿಸುವ ಕಾರ್ಯದಲ್ಲಿ ಸಹಕರಿಸಿದರು.