ಜಾತ್ರೆಗಳಿಂದ ಸಮಾಜದಲ್ಲಿ ಸಾಮರಸ್ಯ: ಶ್ರೀ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಏ. 18
ಜಾತ್ರಾ ಮಹೋತ್ಸವಗಳು ಸರ್ವ ಧರ್ಮೀಯರಲ್ಲಿ ಭಾವೈಕ್ಯತೆ ಮೂಡಿಸುವುದರೊಂದಿಗೆ ಸಮಾಜದ ಅಂಕು-ಡೊಂಕು ತಿದ್ದಲು ಸಹಕಾರಿ ಎಂದು ಗೊಗೇರಿಯ ಹಾಲಕೆರೆ ಅನ್ನದಾನೀಶ್ವರ ಸಂಸ್ಥಾನಮಠದ ಉತ್ತರಾಧಿಕಾರಿ ಮುಪ್ಪಿನ ಬಸವಲಿಂಗದೇವರು ಹೇಳಿದರು.
ಈಚೆಗೆ ಅವರು ಸಮೀಪದ ಗೋಗೇರಿ ಗ್ರಾಮದ ಅನ್ನದಾನೀಶ್ವರ ಶಾಖಾ ಮಠದ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ, ಬಳಿಕ ನಡೆದ ಧರ್ಮಸಭೆಯ ಸಾನ್ನಿಧ್ಯವಹಿಸಿ ಮಾತನಾಡಿದರು.
ಜಾತ್ಯತೀತವಾಗಿರುವ ಮನಸ್ಸುಗಳು ನಂಬಿಕೆಗಳೊಂದಿಗೆ ಆಚರಿಸುವ ಹಬ್ಬಗಳೇ ಜಾತ್ರೆಗಳು. ಕೇವಲ ಮೋಜು, ಮಸ್ತಿಗಳ ಆಚರಣೆಗಳಾಗದೇ ಸರ್ವಧರ್ಮೀಯರ ಸಮ್ಮಿಲನತೆಯ ಕೇಂದ್ರವಾಗಿ, ಅಂತರಂಗದ ಶುದ್ಧಿಯ ಕೇಂದ್ರಗಳಾದಾಗ ಮಾತ್ರ ಆಚರಣೆಗಳು ಸಾರ್ಥಕ ಪಡೆದುಕೊಳ್ಳುತ್ತವೆ. ಈ ನಿಟ್ಟಿನಲ್ಲಿ ಗ್ರಾಮದಲ್ಲಿನ ಲಿಂ. ಅನ್ನದಾನ ಶ್ರೀಗಳ ಜಾತ್ರಾಮಹೋತ್ಸವ ಮಾದರಿಯಾಗಿದೆ ಎಂದರು.
ಹಾಜಿ ಮೌಲಾಸಾಬ ಬಾಗವಾನ ಮಾತನಾಡಿ, ಇಂದಿನ ಯಾಂತ್ರಿಕ ಬದುಕಿನ ಮಧ್ಯೆಯು ಹಿರಿಯರು ಹಿಂದಿನಿಂದ ಆಚರಿಸುತ್ತಾ ಬಂದಿರುವ ಭಾವೈಕ್ಯತೆಯ ಜಾತ್ರಾ ಮಹೋತ್ಸವಗಳು ಮಾನವೀಯ ಸಂಬಂಧಗಳನ್ನು ಗಟ್ಟಿಗೊಸುತ್ತವೆ ಎಂದರು. ಬಸವರಾಜ ಮೂಲಿಮನಿ, ಶಂಕ್ರಯ್ಯ ಮೇಟಿಮಠ, ಬಸಪ್ಪ ಗುಂಡೆ, ಗ್ರಾಪಂ ಸದಸ್ಯ ಹುಸೇನಸಾಬ ಬಾಗವಾನ, ಕೆ.ಕೆ. ಬಾಗವಾನ, ಹುಸೇನಸಾಬ ಬಡಿಗೇರ, ಹೊಳೆಆಲೂರ ಎಪಿಎಂಸಿ ಮಾಜಿ ಉಪಾಧ್ಯಕ್ಷ ಹನುಮಪ್ಪ ಹೊರಪೇಟಿ, ನಿಂಗಪ್ಪ ಗಾರಗಿ, ಕಳಕಪ್ಪ ಹೊರಪೇಟಿ, ಬಸನಗೌಡ ಪಾಟೀಲ, ಹನುಮಪ್ಪ ಕೊಡಕೇರಿ, ಪರಸಪ್ಪ ಹಕ್ಕಿ, ಹನುಮಪ್ಪ ಮಾದರ, ಫಕೀರಪ್ಪ ಮಾದರ ಮುಂತಾದವರು ಉಪಸ್ಥಿತರಿದ್ದರು. ಆರ್.ಕೆ. ಬಾಗವಾನ ಸ್ವಾಗತಿಸಿ, ನಿರೂಪಿಸಿದರು. ಮಹಾಲಿಂಗಪ್ಪ ಸೋಂಪುರ ವಂದಿಸಿದರು.