ಡಾ. ಅಂಬೇಡ್ಕರ್ ಭಾರತದ ಕಣ್ಮಣಿ
ಹೊಳೆಆಲೂರ: ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನೆಯ ಮೂಲಕ ಭಾರತದ ಕಣ್ಮಣಿಯಾಗಿದ್ದಾರೆಂದು ಮಧುರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಮಹಾಬಳೇಶ್ವರ ಗಾಣಿಗೇರ ಹೇಳಿದರು. ಈಚೆಗೆ ಅವರು ಸ್ಥಳೀಯ ಸಂಸ್ಥೆಯ ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 122ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೀನದಲಿತರ ಏಳ್ಗೆಗಾಗಿ ಶ್ರಮಿಸಿದ ಅಂಬೇಡ್ಕರ್ ಎಂದಿಗೂ ಮರೆಯದ ಭಾರತ ಮಾತೆಯ ಹೆಮ್ಮೆಯ ಪುತ್ರರು. ಅವರ ಆದರ್ಶಗಳು ಇಂದಿನ ಯುವಕರಿಗೆ ಮಾದರಿಯಾಗಿದ್ದು, ಯುವಕರು ಅಂಬೇಡ್ಕರ್ ಆದರ್ಶ ಅಳವಡಿಸಿಕೊಳ್ಳಬೇಕೆಂದರು. ಈ ಸಂದರ್ಭದಲ್ಲಿ ರಾಘವೇಂದ್ರ ಗಂಡಗಾಳಕರ, ಯಚ್ಚರಪ್ಪ ಚಲವಾದಿ, ಜಗದೀಶ ಪಂಚಾಳ, ಪ್ರಕಾಶ ಪಾಟೀಲ, ಕಲ್ಲಪ್ಪ ಸಾಸಳ್ಳಿ, ಮುತ್ತಣ್ಣ ಹೂಗಾರ, ಎಲ್.ಎಂ. ದೊಡಮನಿ, ಶೇಖಪ್ಪ ಮುಳಗುಂದ, ಬಸವರಾಜ ನವಲೆ ಮುಂತಾದವರು ಪಾಲ್ಗೊಂಡಿದ್ದರು.
ಅಬಕಾರಿ ದಾಳಿ: ಮದ್ಯ ವಶ
ರೋಣ: ತಾಲೂಕಿನ ಹೊಳೆಮಣ್ಣೂರ ಗ್ರಾಮದ ಕಿರಾಣಿ ಅಂಗಡಿಯ ಮೇಲೆ ಬುಧವಾರ ರಾತ್ರಿ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಗೊಡಚೆಪ್ಪ ಅಂಗಡಿ ಎಂಬುವವನಿಂದ ಅಂದಾಜು ರು. 3 ಸಾವಿರ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಹಾಗೂ ತಾಲೂಕಿನ ನೆಲ್ಲೂರ ತಾಂಡಾದಲ್ಲಿ ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ಕಸ್ತೂರೆವ್ವ ಚವ್ಹಾಣ ಎಂಬುವವಳಿಂದ ರು. 2 ಸಾವಿರ ಮೌಲ್ಯದ ಸಾರಾಯಿ ವಶಪಡಿಸಿಕೊಳ್ಳಲಾಗಿದೆ. ಈ ದಾಳಿಯಲ್ಲಿ ರೋಣ ತಾಲೂಕು ಅಬಕಾರಿ ನಿರೀಕ್ಷಕ ಎ.ಬಿ. ಮಠಪತಿ, ಉಪನಿರೀಕ್ಷಕ ಎಚ್.ಪಿ. ನಾಯಕ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ನೀರು ಪೂರೈಕೆ ಮಾಹಿತಿ
ಗದಗ: ನಗರದ ಶಿವಪ್ಪ ಮಠದ ಲೈನ್, ಬಾಣದ ಲೈನ್, ಎಲಿಗಾರ ಪ್ಲಾಟ್, ವಿಭೂತಿ ಓಣಿ, ಹಿರೇಮಠರ ಲೈನ್, ನೆಹರು ಸ್ಕೂಲ್, ದ್ಯಾಮವ್ವನ ಗುಡಿ ಲೈನ್, ನಾಗಪ್ಪನ ಕಟ್ಟಿ, ಜಂತ್ಲಿಯವರ ಲೈನ್, ಸೋಮನಗೌಡ್ರ ಲೈನ್, ಹನುಮನ ಗರಡಿ, ಕಾಳಮ್ಮನ ಗುಡಿಲೈನ್, ಪುಣೇಕರ ಲೈನ್, ಕಾಗದಗೇರಿ ಲೈನ್, ಗಂಗಾಪುರ ಪೇಟೆ ಈ ಭಾಗಗಳಲ್ಲಿ ಶುಕ್ರವಾರ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.
ಗದಗ ಜಿಲ್ಲೆಯಲ್ಲಿ 4 ನಾಮಪತ್ರ ತಿರಸ್ಕೃತ
ಗದಗ: ಮೇ 5 ರಂದು ನಡೆಯಲಿರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 4 ನಾಮಪತ್ರ ತಿರಸ್ಕೃತಗೊಂಡಿವೆ. ಗದಗ ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿ ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ 2, ಶಿರಹಟ್ಟಿ ಮತ್ತು ರೋಣ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 1 ನಾಮಪತ್ರ ತಿರಸ್ಕೃತವಾಗಿರುತ್ತವೆ ಎಂದು ಪ್ರಕಟಣೆ ತಿಳಿಸಿದೆ.