24ರಿಂದ ತೋಂಟದಾರ್ಯ ಜಾತ್ರಾ ಮಹೋತ್ಸವ: ಚೆಟ್ಟಿ
ಕನ್ನಡಪ್ರಭ ವಾರ್ತೆ, ಗದಗ, ಏ. 19
ಜ. ತೋಂಟದಾರ್ಯ ಜಾತ್ರಾ ಮಹೋತ್ಸವವನ್ನು ಜ. ತೊಂಟದ ಡಾ. ಸಿದ್ದಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ಏ. 24ರಿಂದ 27ರ ವರೆಗೆ ಆಚರಿಸಲಾಗುವುದು ಎಂದು ತೋಂಟದಾರ್ಯ ಜಾತ್ರಾ ಸಮಿತಿ ಅಧ್ಯಕ್ಷ ಕೆ.ಎಸ್. ಚೆಟ್ಟಿ ಹೇಳಿದರು.
ಅವರು ಶುಕ್ರವಾರ ತೋಂಟದಾರ್ಯ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಾತ್ರಾ ಸಮಿತಿ ಹಾಗೂ ಉಪಸಮಿತಿ ಪದಾಧಿಕಾರಿಗಳು ನಾಡಿನ ಜನರೆಲ್ಲರ ಸಹಕಾರದೊಂದಿಗೆ ಜಾತ್ರಾ ಕಾರ್ಯಕ್ರಮ ನಡೆದು ಬರಲಿವೆ. ಏ. 24ರಂದು ಸಂಜೆ 7.30ಕ್ಕೆ ಜಾತ್ರಾ ಮಹೋತ್ಸವವನ್ನು ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಡಾ. ಸಿದ್ಧರಾಮ ಶ್ರೀಗಳ ಸಾನ್ನಿಧ್ಯದಲ್ಲಿ ಕರ್ನಾಟಕ ಉಪಲೋಕಾಯುಕ್ತ ಸುಭಾಸ ಆದಿ ಉದ್ಘಾಟಿಸುವರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಧ್ಯಕ್ಷ ಎನ್.ತಿಪ್ಪಣ್ಣ ಹಾಗೂ ಹಿಂದೂ ಮುಸ್ಲಿಂ ಭಾವ್ಯಕ್ಯ ನಿಧಿ ಗೊಳಸಂಗಿಯ ಕಾಶೀಂಸಾಬ ಬಿಜಾಪುರ ಅತಿಥಿಗಳಾಗಿ ಆಗಮಿಸುವರು. ಕೆಎಲ್ಇ ಚೇರಮನ್ ಡಾ. ಪ್ರಭಾಕರ ಕೋರೆ, ಡಾ. ಸಿದ್ದನಗೌಡ ಪಾಟೀಲ, ಡಾ. ಸರಜೂ ಕಾಟ್ಕರ ಅವರನ್ನು ಸನ್ಮಾನಿಸಲಾಗುವುದು. ಲಿಂಗಾಯತ ಪುಣ್ಯಪುರುಷ ಸಾಹಿತ್ಯ ರತ್ನಮಾಲೆ ಗ್ರಂಥಗಳಡಿ ಚಿಕ್ಕೋಡಿ ಶಿವಲಿಂಗಸ್ವಾಮಿ, ಡಾ. ಪ್ರಭುದೇವ ದೇಸಾಯಿ, ಗಡಹಿಂಗ್ಲಜ ಚಂದ್ರಮ್ಮತಾಯಿ, ಎಸ್.ಡಿ. ಇಂಚಲ ಹಾಗೂ ಹುಕ್ಕೇರಿ ಬಾಳಪ್ಪ ಈ 5 ಕೃತಿಗಳ ಬಿಡುಗಡೆ ನಡೆಯಲಿದೆ. ಏ. 25ರ ಸಂಜೆ 6.30ಕ್ಕೆ ತೋಂಟದಾರ್ಯ ಮಹಾರಥೋತ್ಸವ ಜರುಗಲಿದೆ. ಇದಕ್ಕೂ ಮೊದಲು ಸಂಜೆ 4ಕ್ಕೆ ಶ್ರೀಮಠದ ಪರಂಪರೆಯಂತೆ ಎಸ್.ಎಸ್. ಕಳಸಾಪುರಶೆಟ್ರ ನಿವಾಸದಿಂದ ಶ್ರೀಮಠಕ್ಕೆ ಮೆರವಣಿಗೆ ಮೂಲಕ ಆಗಮಿಸುವರು. ರಾತ್ರಿ 8ಕ್ಕೆ ನಡೆವ ಸಮಾರಂಭದಲ್ಲಿ ಇಳಕಲ್ ಡಾ. ಮಹಾಂತಪ್ಪಗಳ ಸಮ್ಮುಖ ವಹಿಸುವರು. ಹಂಪಿ ಕನ್ನಡ ವಿವಿ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಅತಿಥಿಗಳಾಗಿ ಆಗಮಿಸುವರು.
ದುರ್ಗಾಬಾಯಿ ದೇಶಮುಖ್ ಪ್ರಶಸ್ತಿ ಪುರಸ್ಕೃತೆ ಸುಶೀಲಮ್ಮ ಬೆಂಗಳೂರು ಹಾಗೂ ಕನ್ನಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಗುರಮ್ಮ ಸಂಕಿನಶಿರೂರ ಅವರನ್ನು ಸನ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ಹಲವು ಕೃತಿಗಳ ಬಿಡುಗಡೆ ಕಾರ್ಯಕ್ರಮ ಜರುಗಲಿದೆ. ಏ. 26ರಂದು ಸಂಜೆ 6.30ಕ್ಕೆ ಲಘು ರಥೋತ್ಸವ ನಡೆಯಲಿದೆ. ರಾತ್ರಿ 8ಕ್ಕೆ ನಡೆವ ಸಮಾರಂಭದಲ್ಲಿ ಆನಂದಪುರದ ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು ಹಾಗೂ ಗುಲ್ಬರ್ಗಾದ ಡಾ. ಮಹಾಂತ ಶಿವಾಚಾರ್ಯರು ಸಮ್ಮುಖ ವಹಿಸುವರು. ಕರ್ನಾಟಕ ಲೋಕಾಯುಕ್ತ ನಿರ್ದೇಶಕ ಡಿ.ಎನ್. ಮುನಿಕೃಷ್ಣ ಅತಿಥಿಗಳಾಗಿ ಆಗಮಿಸುವರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿರಂಜನ ವಾಲಿಶೆಟ್ಟರ್ ಹಾಗೂ ಸತ್ಯಾನಂದ ಪಾತ್ರೋಟ ಅವರನ್ನು ಸನ್ಮಾನಿಸಲಾಗುವುದು ಎಂದರು. 27ರಂದು ಜಾತ್ರಾ ಮಹೋತ್ಸವದ ಮಂಗಲೋತ್ಸವ ಜರುಗಲಿದೆ.
ಆರೋಗ್ಯ ಹಾಗೂ ಕೃಷಿ ಕಾರ್ಯಕ್ರಮ: ಏ. 21ರಂದು ಬೆಳಗ್ಗೆ 9.30ಕ್ಕೆ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಮನೋ ರೋಗಿಗಳ ಉಚಿತ ತಪಾಸಣೆ, ಬಂಜೆತನ ನಿವಾರಣೆ ತಪಾಸಣೆ, ಚಿಕ್ಕಮಕ್ಕಳ ಹೃದಯರೋಗ ತಪಾಸಣೆ, ಕೀಲುನೋವು ತಪಾಸಣೆ ಶಿಬಿರ ನಡೆಯಲಿವೆ.
ಏ. 22ರಂದು ಬೆಳಗ್ಗೆ 10ಕ್ಕೆ ಜ. ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಡಾ. ಗುರುಪ್ರಸಾದ ಅವರಿಂದ ಪ್ರಥಮ ಚಿಕಿತ್ಸಾ ವಿಧಾನ ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸ ರಕ್ತದಾನ ಶಿಬಿರ ನೇತ್ರದಾನಿಗಳ ನೊಂದನಿ ಶಿಬಿರ ನಡೆಯಲಿದೆ.
ಏ. 24ರಂದು ಬೆಳಗ್ಗೆ 10ರಿಂದ ಕೃಷಿ ವಿಚಾರ ಸಂಕಿರಣ, 27ರಂದು ಮಧ್ಯಾಹ್ನ 2ಕ್ಕೆ ರೈತರೊಂದಿಗೆ ವಿಜ್ಞಾನಿಗಳ ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದರು. ಉಪಾಧ್ಯಕ್ಷ ಶಿವಪುತ್ರಪ್ಪ ಕುಂದಗೋಳ, ವಿದ್ಯಾಧರ ದೊಡ್ಡಮನಿ, ಗಂಗಾಧರ ಹಿರೇಮಠ, ಕಾರ್ಯದರ್ಶಿ ಮುರುಘ ರಾಜೇಂದ್ರ ಬಡ್ನಿ, ಕಿಶನ್ ಮೇರವಾಡೆ, ನಟರಾಜ ಮೂರಶಿಳ್ಳಿನ, ಬಸವರಾಜ ರಾಮನಕೊಪ್ಪ, ಚಂದ್ರು ತಡಸದ ಮುಂತಾದವರು ಉಪಸ್ಥಿತರಿದ್ದರು.