ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಲ್ಪಸಂಖ್ಯಾತರ ಹಿತಾಭಿವೃದ್ಧಿ ಕೆಜೆಪಿಯಿಂದ ಮಾತ್ರ ಸಾಧ್ಯ: ಡಂಕೇದ

Rashmi Kasaragodu
Updated On : 20 Apr 2013, 11:09 am

ಗದಗ: ಅಲ್ಪಸಂಖ್ಯಾತರ ಹಿತಾಭಿವೃದ್ಧಿ ಕೆಜೆಪಿಯಿಂದ ಮಾತ್ರ ಸಾಧ್ಯ. ಇದನ್ನು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಅಲ್ಪಸಂಖ್ಯಾತ ನಿಗಮಕ್ಕೆ ಬಿಡುಗಡೆಯಾದ ಅನುದಾನದ ಮೊತ್ತವೇ ಸಾಕ್ಷಿ ಎಂದು ಕೆಜೆಪಿ ಧುರೀಣ ರಜಾಕ ಡಂಕೇದ ಹೇಳಿದರು.
ತಾಲೂಕಿನ ಮುಳಗುಂದ ಪಟ್ಟಣದ ಸಮೀಪದ ದಾವಲ್ ಮಲೀಕ್ ಕ್ಷೇತ್ರದ ಹತ್ತಿರ ಕೆಜೆಪಿ ವತಿಯಿಂದ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶಕ್ಕೆ ಇತಿಹಾಸದಲ್ಲಿ ಪ್ರಥಮ ಬಾರಿಗೆ ಹಜ್ ಮಹಲ್ ಕಟ್ಟಡ ನಿರ್ಮಾಣಕ್ಕೆ 10 ಎಕರೆ ಜಮೀನು, ಪ್ರಾಥಮಿಕ ಅನುದಾನವಾಗಿ ರು. 40 ಕೋಟಿ ಬಿಡುಗಡೆ, ಶಾದಿ ಮಹಲ್ ನಿರ್ಮಾಣ ಮತ್ತು ಅಲ್ಪಸಂಖ್ಯಾತರ ಆರ್ಥಿಕ ಸಬಲತೆಗಾಗಿ ರು. 850 ಕೋಟಿ ಬಿಡುಗಡೆ ಮಾಡಿದ್ದಾರೆ. ಅಲ್ಪಸಂಖ್ಯಾತ ಧಾರ್ಮಿಕ ಕೇಂದ್ರಗಳ ರಕ್ಷಣೆಗೆ ಕ್ರಮ ಕೈಗೊಂಡ ಯಡಿಯೂರಪ್ಪ ಅವರನ್ನು ಮರೆಯಲ್ಲ ಎಂದರು.
ಕೆಜೆಪಿ ಅಭ್ಯರ್ಥಿ ಎಸ್.ಬಿ. ಸಂಕಣ್ಣವರ ಮಾತನಾಡಿ, ಕೆಜೆಪಿ ಗೆಲುವು ರಾಜ್ಯದ ಹಿತಾಸಕ್ತಿಯ ಗೆಲುವಾಗಿದೆ. ತಮಿಳುನಾಡು, ಆಂಧ್ರಪ್ರದೇಶ ಮುಂತಾದ ರಾಜ್ಯಗಳು ಪ್ರಾದೇಶಿಕ ಪಕ್ಷಗಳಿಂದಲೇ ಅಭಿವೃದ್ಧಿ ಸಾಧಿಸುತ್ತಿರುವುದು ಇಲ್ಲಿ ಸ್ಮರಣೀಯ ಎಂದರು.
ಕೆಜೆಪಿ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇರ್ಷಾದ ಮಾನ್ವಿ ಮಾತನಾಡಿದರು. ಮುಜಾವರ್, ಮುನ್ನಾ ಕುಕನೂರ ಉಪಸ್ಥಿತರಿದ್ದರು. ಖಾಲಿದ್ ಕೊಪ್ಪಳ ಸ್ವಾಗತಿಸಿದರು. ಜಿಲ್ಲಾ ವಕ್ತಾರ ಶ್ರೀನಿವಾಸ ಹುಬ್ಬಳ್ಳಿ ಕಾರ್ಯಕ್ರಮ ನಿರೂಪಿಸಿದರು. ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಅಮರನಾಥ ಬೆಟಗೇರಿ ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement