ಚುಟುಕು ಸಾಹಿತ್ಯ ಹಬ್ಬದ ಸಿಹಿಯೂಟ: ಸವದಿ
ಮುಂಡರಗಿ: ಚುಟುಕು ಸಾಹಿತ್ಯ ಕೆಲವೇ ಸಾಲುಗಳಲ್ಲಿ ಅರ್ಥಗರ್ಭಿತ ಸಂದೇಶವನ್ನು ನೀಡುವ ಶಕ್ತಿ ಹೊಂದಿದೆ. ಅದು ಹಬ್ಬದಲ್ಲಿ ಮಾಡುವ ಸಿಹಿ ಊಟವಿದ್ದಂತೆ ಎಂದು ಮುಂಡರಗಿಯ ಸಿಪಿಐ ಸುನಿಲ ಸವದಿ ಹೇಳಿದರು.
ಪಟ್ಟಣದ ಸರ್ಕಾರಿ ಕೋಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕದ ಉದ್ಘಾಟನೆ ಮತ್ತು ಚಾಂದ್ರಮಾನ ಯುಗಾದಿಯ ಹಾಸ್ಯ ಚುಟುಕು ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅತಿಥಿಗಳಾಗಿದ್ದ ಪ್ರೊ ಎ.ವೈ. ನವಲಗುಂದ ಮಾತನಾಡಿ, ನಗುವನ್ನು ಮರೆತು ನಾವು ಗಂಭೀರ ಜೀವನ ನಡೆಸುತ್ತಿದ್ದೇವೆ. ಇದನ್ನು ದೂರ ಮಾಡಬೇಕಾದರೆ ಹಾಸ್ಯ ಹಾಗೂ ಚುಟುಕು ಸಾಹಿತ್ಯ ಮುಖ್ಯ. ಚುಟುಕಿನಲ್ಲಿ ನವಸರಗಳನ್ನು ಉತ್ಪತ್ತಿ ಮಾಡುವ ಸಾಮರ್ಥ್ಯವಿರುತ್ತದೆ ಎಂದರಲ್ಲದೆ, ಅನೇಕ ಹಾಸ್ಯ ಪ್ರಸಂಗಗಳ ಮೂಲಕ ರಂಜಿಸಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಪ್ರೊ ಸಿ.ಎಸ್.ಅರಸನಾಳ ಮಾತನಾಡಿ, ಚುಟುಕುಗಳೆಂದರೆ ಮೂಗು ಮುರಿಯುತ್ತಿದ್ದವರು ಈಗ ಅವುಗಳತ್ತ ಹೆಚ್ಚು ಒಲವು ತೋರಿಸುತ್ತಿದ್ದಾರೆ ಎಂದರು.
ಮಂಜುಳಾ ಇಟಗಿ, ಗಿರಿಜಾ ಹಸಬಿ, ಶೋಭಾ ಮೇಟಿ, ಬಿ.ಸಿ. ರವಿಚಂದ್ರ, ಡಾ ನಿಂಗು ಸೊಲಗಿ, ಶಂಕರ ಕುಕನೂರ ಚುಟುಕುಗಳನ್ನು ಓದಿದರು. ಬೇವು-ಬೆಲ್ಲ ವಿತರಿಸಲಾಯಿತು.
ತಾಲೂಕು ಕಸಾಪ ಅಧ್ಯಕ್ಷ ಎಸ್.ಬಿ. ಹಿರೇಮಠ, ಪ್ರೊ ಆರ್.ಎಲ್. ಪೊಲೀಸಪಾಟೀಲ, ಡಾ ಪಿ.ಬಿ. ಹಿರೇಗೌಡ್ರ, ಪ್ರೊ ಎಸ್.ಆರ್. ಬಸಾಪುರ, ಶರಣಪ್ಪ ಕುಬಸದ, ವಿಶ್ವನಾಥ ಉಳ್ಳಾಗಡ್ಡಿ, ಬಿ.ಆರ್. ಕಬ್ಬೇರ ಉಪಸ್ಥಿತರಿದ್ದರು. ಕಾಶೀನಾಥ ಬಿಳಿಮಗ್ಗದ ಸ್ವಾಗತಿಸಿದರು. ವಿಜಯಕುಮಾರ ಬಣಕಾರ ನಿರೂಪಿಸಿದರು. ಭಾಗ್ಯಲಕ್ಷ್ಮೀ ಇನಾಮತಿ ವಂದಿಸಿದರು.