ಪ್ರತಿಯೊಬ್ಬರೂ ಕಡ್ಡಾಯ ಮತ ಚಲಾಯಿಸಿ: ಪಾಟೀಲ್
ರೋಣ: ಮತದಾನ ಅತ್ಯಂತ ಪವಿತ್ರವಾಗಿದೆ. ಆಮಿಷಕ್ಕೆ ಒಳಗಾಗಿ ಮತವನ್ನು ಮಾರಿಕೊಳ್ಳುವುದು ಹಾಗೂ ಮತದಾನ ಮಾಡದೇ ಇರುವುದು ಪ್ರಜಾಪ್ರಭುತ್ವ ನೀತಿಗೆ ವಿರೋಧವಾಗಿದೆ. ಕಡ್ಡಾಯವಾಗಿ ಪ್ರತಿಯೊಬ್ಬರೂ ಮತದಾನ ಮೂಲಕ ಪ್ರಜಾಪ್ರಭುತ್ವದ ಯಶಸ್ಸಿಗೆ ಸಹಕರಿಸುವಂತೆ ತಹಸೀಲ್ದಾರ ಎಂ.ಬಿ. ಪಾಟೀಲ್ ಮನವಿ ಮಾಡಿದರು.
ಅವರು ಗುರುವಾರ ಸ್ಥಳೀಯ ಪುರಸಭೆ ಆವರಣದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಮತ್ತು ಸ್ವೀಪ್ ಮತ ಜಾಗೃತಿ ಸಮಿತಿ ವತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮತದಾನದಲ್ಲಿ ಸ್ವ ಇಚ್ಛೆಯಿಂದ ಪಾಲ್ಗೊಳ್ಳಬೇಕು. ಯಾರಿಗೆ ಮತ ಚಲಾಯಿಸಬೇಕು ಎಂಬುದು ಮತದಾರನ ನಿರ್ಧಾರ. ಯಾವುದೇ ಆಸೆ, ಆಮಿಷ ಮತ್ತು ಜಾತೀಯತೆಗೆ ಒಳಗಾಗಬಾರದು. ಏನೇ ಕೆಲಸವಿದ್ದರೂ ಮೇ 5ರಂದು ಮತದಾನ ಮಾಡುವುದನ್ನು ಮರೆಯಬಾರದು. ಮತ ಚಲಾವಣೆ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಮತದಾನ ಪ್ರಕ್ರಿಯೆ ಬೆಳಗ್ಗೆ 7ರಿಂದ ಸಂಜೆ 5 ಗಂಟೆ ವರೆಗೆ ಜರುಗಲಿದೆ ಎಂದರು.
ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಪ್ರಶಾಂತ ವರಗಪ್ಪನವರ ಮಾತನಾಡಿದರು. ಮತದಾನದಲ್ಲಿ ಪಾಲ್ಗೊಳ್ಳುವಿಕೆ ಮತ್ತು ಮತದಾನದ ಕುರಿತು ಜಾಗೃತಿಯನ್ನು ರೋಣ ತಾಲೂಕಿನ ಅರುಣೋದಯ ಕಲಾ ತಂಡದವರು ಜಾನಪದ ನೃತ್ಯ, ಹಾಡು, ನಾಟಕ ಮತ್ತು ಅಭಿನಯದ ಮೂಲಕ ಜನರಲ್ಲಿ ಮೂಡಿಸಿದರು.
ಪುರಸಭೆ ಮುಖ್ಯಾಧಿಕಾರಿ ವಿ. ರಾಮಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಚ್. ಪರಮೇಶಪ್ಪ, ಸಿಡಿಪಿಓ ಕೆಂಪಹನಮಯ್ಯ, ವ್ಯವಸ್ಥಾಪಕ ಬಸಯ್ಯ ಅಂಗಡಿ, ರಮೇಶ ಹೊಸಮನಿ ಉಪಸ್ಥಿತರಿದ್ದರು.