ಮತದಾರರು ಬಿಜೆಪಿ ಬೆಂಬಲಿಸಿ: ಬಿದರೂರ
ಗದಗ: 1992 ರಿಂದ 2008ರ ವರೆಗೆ ಆಡಳಿತ ನಡೆಸಿದ ಕಾಂಗ್ರೆಸ್ ಕುಡಿಯುವ ನೀರಿನ 2ನೇ ಹಂತದ ಯೋಜನೆಗೆ ಚಾಲನೆ ಏಕೆ ನೀಡಲಿಲ್ಲ ಎಂದು ಶಾಸಕ ಶ್ರೀಶೈಲಪ್ಪ ಬಿದರೂರ ಪ್ರಶ್ನಿಸಿದರು.
ಈಚೆಗೆ ಅವರು ನಗರದ 28ನೇ ವಾರ್ಡ್ನಲ್ಲಿ ಚುನಾವಣೆ ಪ್ರಚಾರಾರ್ಥ ಮಹಾಂತೇಶ ಪಾಟೀಲ ನಿವಾಸದಲ್ಲಿ ನಡೆದ ಅಲ್ಲಿನ ನಿವಾಸಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಆಡಳಿತದಿಂದ ಗದಗ ಪರಿಸರ ಕಂಡ ಸುಧಾರಣೆಯಾದರೂ ಏನೆಂಬುದು ಯಕ್ಷ ಪ್ರಶ್ನೆಯಾಗಿದೆ. ಗದಗನಲ್ಲಿ ಅಭಿವೃದ್ಧಿ ಪರ್ವ ಮುಂದುವರಿಯಲು ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು. ಕಾಂತಿಲಾಲ ಬನ್ಸಾಲಿ, ಶಹರ ಬಿಜೆಪಿ ಅಧ್ಯಕ್ಷ ತೋಟುಸಾ ಭಾಂಡಗೆ, ಪ್ರೇಮನಾಥ ಬಣ್ಣದ, ಸಂಗಮೇಶ ದುಂದೂರ, ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯಶ್ರೀ ಉಗಲಾಟದ ಮುಂತಾದವರು ಮಾತನಾಡಿ, ಬಿಜೆಪಿಯ 5 ವರ್ಷದ ಅಧಿಕಾರಾವಧಿಯಲ್ಲಿ ಆಗಿರುವ ಅಭಿವೃದ್ಧಿ ಗದಗ ಇತಿಹಾಸದಲ್ಲಿಯೇ ಮೊದಲು ಎಂಬುದನ್ನು ಜನಸಾಮಾನ್ಯರೂ ಬಲ್ಲವರಾಗಿದ್ದಾರೆ ಎಂದರು. 28ನೇ ವಾರ್ಡಿನ ಹಲವರು ಸಭೆಯಲ್ಲಿ ಪಾಲ್ಗೊಂಡು ಬಿಜೆಪಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.