ಸರ್ವ ಸಮುದಾಯದ ಏಳ್ಗೆಗೆ ಶ್ರಮಿಸಿದ್ದೇನೆ: ಬಂಡಿ
ಕನ್ನಡಪ್ರಭ ವಾರ್ತೆ, ನರೇಗಲ್ಲ, ಏ. 19
ರೋಣ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಜತೆಗೆ ಸರ್ವಸಮುದಾಯದ ಏಳ್ಗೆಗೆ ಶ್ರಮಿಸಿದ ಪ್ರತಿಫಲವಾಗಿ ಕ್ಷೇತ್ರದ ಎಲ್ಲ ಮತದಾರರು ಬಿಜೆಪಿ ಗೆಲುವಿಗೆ ಕಂಕಣಬದ್ಧರಾಗಿದ್ದಾರೆಂದು ರೋಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ ಹೇಳಿದರು.
ಅವರು ಇತ್ತೀಚೆಗೆ ಸ್ಥಳೀಯ ಬಸವೇಶ್ವರ ಇಂಡಸ್ಟ್ರೀಜ್ನಲ್ಲಿ ನಡೆದ ರೋಣ ಮತಕ್ಷೇತ್ರದ ಕಾರ್ಯಕರ್ತರ ಹಾಗೂ ವಿವಿಧ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಗೊಂಡ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ನರೇಗಲ್ಲ ಪಟ್ಟಣಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪಪೂ ಕಾಲೇಜು ಹಾಗೂ ಸರ್ಕಾರಿ ಪದವಿ ಕಾಲೇಜುಗಳನ್ನು ಮಂಜೂರು ಮಾಡಿಸಿದ್ದೇನೆ. ಹಲವು ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು ಇದನ್ನು ಪರಿಗಣಿಸಿ ಮತದಾರರು ಈ ಬಾರಿಯೂ ನನಗೆ ಮತ ನೀಡುವ ಮೂಲಕ ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ನರೇಗಲ್ಲ ಘಟಕದ ಬಿಜೆಪಿ ಅಧ್ಯಕ್ಷ ಉಮೇಶ ಸಂಗನಾಳಮಠ ಮಾತನಾಡಿದರು. ಈ ಸಂದರ್ಭದಲ್ಲಿ ಬೇರೆ ಪಕ್ಷದಿಂದ ಬಂದ ನೂರಾರು ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ನರೇಗಲ್ಲ ಘಟಕದ ಬಿಜೆಪಿ ಉಪಾಧ್ಯಕ್ಷ ಮಲ್ಲನಗೌಡ ಪಾಟೀಲ, ಪಪಂ ಸದಸ್ಯ ಯಲ್ಲಪ್ಪ ಬಂಡಿವಡ್ಡರ, ಅಂದಪ್ಪ ಮಡಿವಾಳರ, ವರುಣ ಸಂಗನಾಳ, ರಜಾಕಸಾಬ ಹೊಸಮನಿ, ಮಡಿವಾಳರ, ಮಂಜವ್ವ ಚಳ್ಳಮರದ, ನಿರ್ಮಲಾ ಒಳಕೋಟಿ, ಶಶಿಧರ ಸಂಕನಗೌಡ್ರ, ಬಸವರಾಜ ಕೊಟಗಿ, ಪುಟ್ಟಣ್ಣ ಹೊಸಮನಿ, ಮಲ್ಲೇಶ ಬೆಡಗಲ್ಲ, ಪ್ರಭುಸ್ವಾಮಿ ಅರವಟಗಿಮಠ, ವೀರಣ್ಣ ಗುಜಮಾಗಡಿ ಮುಂತಾದವರು ಉಪಸ್ಥಿತರಿದ್ದರು. ಆರ್.ಜಿ. ಪಾಟೀಲ ಸ್ವಾಗತಿಸಿ, ವಂದಿಸಿದರು.