ಗುಂಜಳದ ಎತ್ತುಗಳು ಪ್ರಥಮ
ಲಕ್ಷ್ಮೇಶ್ವರ: ಬಾರುಕೋಲಿನ ಛಟಾರ್ ಎನ್ನುವ ಶಬ್ದ ಮೈ ಮೇಲೆ ಬೀಳುತ್ತಲೇ ಖಾಲಿ ಗಾಡಾ ಹೆಗಲಿಗೆ ಕಟ್ಟಿಕೊಂಡು ನಾಗಾಲೋಟದಿಂದ ಓಡಲು ಸಿದ್ಧವಾಗಿರುವ ಎತ್ತುಗಳು, ನೆರೆದಿದ್ದ ಜನಸಮೂಹದ ಕೇಕೆ-ಸಿಳ್ಳು ಮುಗಿಲು ಮುಟ್ಟುವಂತಿತ್ತು.
ರಾಜ್ಯದ ತುಂಬೆಲ್ಲಾ ಚುನಾವಣಾ ಕಾವು ತುಂಬಿಕೊಂಡು ಊರುಗಳೆಲ್ಲಾ ರಣರಂಗವಾಗಿರುವಾಗ ಪಕ್ಕದ ಬಸಾಪುರ ಗ್ರಾಮದಲ್ಲಿ ಮಾತ್ರ ಎತ್ತುಗಳ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಜನರ ಆಕರ್ಷಣಿಯ ಕೇಂದ್ರವಾಗಿತ್ತು. ಇದಿಷ್ಟು ರಾಜ್ಯ ಮಟ್ಟದ ಖಾಲಿ ಗಾಡಾ ಓಟದ ಸ್ಪರ್ಧೆಯಲ್ಲಿ ಕಂಡು ಬಂದ ದೃಶ್ಯಗಳು.
ಸಮೀಪದ ಬಸಾಪುರ ಗ್ರಾಮದಲ್ಲಿ ಶುಕ್ರವಾರ ಬಸವೇಶ್ವರ ಭಜನಾ ಸಂಘವು ಖಾಲಿ ಗಾಡಾ ಸ್ಪರ್ಧೆ ಏರ್ಪಡಿಸಿತ್ತು. ಬೆಳಗಿನಿಂದಲೆ ರೈತರು ತಮ್ಮ ಪ್ರೀತಿ ಪಾತ್ರವಾದ ಎತ್ತುಗಳನ್ನು ತಂದು ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದರು. ಮಧ್ಯಾಹ್ನದ ಹೊತ್ತಿಗೆ ಸುಡು ಬಿಸಿಲನ್ನು ಲೆಕ್ಕಿಸದೆ ಜನರು ತಂಡೋಪ ತಂಡವಾಗಿ ಬಂದು ಎತ್ತುಗಳು ಖಾಲಿ ಗಾಡಾವನ್ನು ಎಳೆಯುವುದನ್ನು ತಮ್ಮ ಕಣ್ತುಂಬಾ ತುಂಬಿಕೊಂಡು ಸಂತೋಷಪಟ್ಟರು.
ಗದಗ ಮತ್ತು ಧಾರವಾಡ ಜಿಲ್ಲೆಯ ಹಲವಾರು ಎತ್ತುಗಳು ಗಾಡಾ ಓಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಯರೇಬೂದಿಹಾಳದ ರೈತ ವಿನಾಯಕ ಕುರುವಿನಶೆಟ್ಟಿ ಎನ್ನುವ ರೈತನ ಎತ್ತುಗಳಿಗೆ ಹಗ್ಗವನ್ನು ಕಟ್ಟದೇ ಗಾಡಾವನ್ನು ಎಳೆದು ನೆರೆದಿದ್ದ ಜನ ಮನವನ್ನು ಸೂರೆಗೊಂಡವು. ಸ್ಪರ್ಧೆಯಲ್ಲಿ ಸುಮಾರು 10ಕ್ಕೂ ಹೆಚ್ಚು ಸ್ಪರ್ಧಾ ಎತ್ತುಗಳು ಭಾಗವಹಿಸಿದ್ದವು.
ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದ ಎತ್ತುಗಳಿಗೆ 10 ಗ್ರಾಂ ಬಂಗಾರವನ್ನು ಬಸವೇಶ್ವರ ಕಮಿಟಿ ನೀಡಿತು. ದ್ವಿತೀಯ ಬಹುಮಾನವಾದ 5 ಗ್ರಾಂ ಬಂಗಾರವನ್ನು ಮಲ್ಲಯ್ಯ ಭಕ್ತಿಮಠ ನೀಡಿದರು. ತೃತೀಯ ಬಹುಮಾನವಾದ 2.5 ಬಂಗಾರವನ್ನು ಈರುಬಾಯಿ ಕೊಟಗಿ ಅವರು ನೀಡಿದರು. ಗುಂಜಳದ ಎತ್ತುಗಳು ಪ್ರಥಮ ಬಹುಮಾನ ಬಾಚಿಕೊಂಡವು. 29 ಬಹುಮಾನಗಳನ್ನು ಇಡಲಾಗಿತ್ತು. ಅನೇಕ ಆಕರ್ಷಕ ಬಹುಮಾನಗಳನ್ನು ಸ್ಪರ್ಧೆಯಲ್ಲಿ ವಿಜೇತರಾದ ಎತ್ತುಗಳಿಗೆ ನೀಡಲಾಯಿತು. ಈ ಸ್ಪರ್ಧೆಯನ್ನು ಬಸವೇಶ್ವರ ಭಜನಾ ಸಂಘ ಹಾಗೂ ಗ್ರಾಮದ ಯುವಕರು ಸಂಘಟಿಸಿದ್ದರು.