ತಮ್ಮ ಖಾತೆ ಮಾಹಿತಿ ಇಲ್ಲದವರನ್ನು ತಿರಸ್ಕರಿಸಿ: ಸಿದ್ದರಾಮಯ್ಯ
ಮುಂಡರಗಿ: ತಾವು ಸಚಿವರಾಗಿದ್ದ ಇಲಾಖೆ ಬಗ್ಗೆ ಅಧಿವೇಶನದಲ್ಲಿ ಮಾಹಿತಿ ನೀಡದ ಮತ್ತು ಆ ಇಲಾಖೆ ಬಗ್ಗೆ ತಿಳಿವಳಿಕೆಯೂ ಇಲ್ಲದ ಸಚಿವ ಕಳಕಪ್ಪ ಬಂಡಿಗೆ ಮಹತ್ವದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರನ್ನಾಗಿ ಮಾಡಿದ್ದು, ಹಾಸ್ಯಾಸ್ಪದ ಸಂಗತಿ. ಅಂಥವರನ್ನು ಆಯ್ಕೆ ಮಾಡದೇ ಜ್ಞಾನವಿದ್ದವರನ್ನು ಆಯ್ಕೆ ಮಾಡಿ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದರು.
ಅವರು ಶನಿವಾರ ರೋಣ ಮತಕ್ಷೇತ್ರದ ಡಂಬಳ ಹೋಬಳಿಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಜನಪರ ಕಾಳಜಿಯುಳ್ಳ ಜಿ.ಎಸ್. ಪಾಟೀಲರಿಗೆ ಈ ಬಾರಿ ಮತ ಹಾಕಿರಿ ಎಂದು ಮನವಿ ಮಾಡಿದರು. ಸಿಂಗಟಾಲೂರು ಹುಲಿಗುಡ್ಡ ಏತನೀರಾವರಿ ಕಾಮಗಾರಿಗೆ 1999ರಲ್ಲಿ ಜೆ.ಎಚ್.ಪಟೇಲ್ ಮುಖ್ಯಮಂತ್ರಿ ಇದ್ದಾಗ ಅಡಿಗಲ್ಲು ಹಾಕಲಾಗಿತ್ತು. ನಂತರ ಎಸ್.ಎಂ. ಕೃಷ್ಣ ಅವರ ಕಾಂಗ್ರೆಸ್ ಸರ್ಕಾರದಲ್ಲಿ ಅಂದಿನ ನೀರಾವರಿ ಸಚಿವ ಎಚ್.ಕೆ. ಪಾಟೀಲ ಯೋಜನೆಯ ಗಾತ್ರವನ್ನು ವಿಸ್ತರಿಸಿದ್ದರು. 5 ವರ್ಷಗಳ ಕಾಲ ಅಧಿಕಾರಕ್ಕಾಗಿ ಕಾಲ ಕಳೆದ ಬಿಜೆಪಿ ಸರ್ಕಾರ ಈ ಯೋಜನೆಯನ್ನು ಪೂರ್ಣಗೊಳಿಸಲೇ ಇಲ್ಲ ಎಂದು ದೂರಿದ ಅವರು, ಸಮ್ಮಿಶ್ರ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳು ಅಸಾಧ್ಯ ಎನ್ನುವುದು ಮತದಾರರಿಗೆ ತಿಳಿದಿದೆ. ಹಾಗಾಗಿ ಸ್ಥಿರ ಆಡಳಿತಕ್ಕಾಗಿ ಕಾಂಗ್ರೆಸ್ನ್ನು ಬೆಂಬಲಿಸುತ್ತಾರೆ ಎಂದರು. ಜಿಲ್ಲಾಧ್ಯಕ್ಷ ಜಿ.ಎಸ್. ಗಡ್ಡದೇವವರಮಠ, ರಾಮಕೃಷ್ಣ ದೊಡ್ಡಮನಿ, ಹೇಮಂತಗೌಡ ಪಾಟೀಲ, ವಾಸಣ್ಣ ಕುರುಡಗಿ, ಡಾ. ಬಿ.ಎಫ್. ದಂಡೀನ, ವಿ.ಆರ್. ಗುಡಿಸಾಗರ, ವಿ.ಎಲ್. ನಾಡಗೌಡ್ರ, ಮಿಥುನ್ ಪಾಟೀಲ, ದಶರಥ ಗಾಣಿಗೇರ, ಫಕ್ಕೀರಪ್ಪ ಹೆಬಸೂರ, ರಾಮಪ್ಪ ಮೇಗಲಮನಿ, ಶಿವಕುಮಾರಗೌಡ ಪಾಟೀಲ, ಯಲ್ಲಪ್ಪ ರಾಮೇನಹಳ್ಳಿ, ಭೀಮಸಿಂಗ್ ರಾಠೋಡ, ರಾಮು ಕಲಾಲ, ಎಸ್.ಡಿ. ಮಕಾಂದಾರ, ಸುರೇಶ ಮಾಳಗಿಮನಿ, ಮಹ್ಮದ್ಗೌಸ್ ತಾಂಬೋಟಿ ಸೇರಿದಂತೆ ಅನೇಕರು ಇದ್ದರು.
ಇದೇ ಸಂದರ್ಭದಲ್ಲಿ ಬಿಜೆಪಿಯಿಂದ ವಿ.ಟಿ. ಮೇಟಿ, ಸಿ.ಟಿ. ಪ್ಯಾಟಿ ಸೇರಿದಂತೆ ಅನೇಕರು ಕಾಂಗ್ರೆಸ್ ಸೇರಿದರು.