ಇಂದು ನರೇಗಲ್ಲಗೆ ಶೆಟ್ಟರ್
ನರೇಗಲ್ಲ: ಪಟ್ಟಣದ ಗಜೇಂದ್ರಗಡ ರಸ್ತೆಯ ಕನಕದಾಸ ಶಿಕ್ಷಣ ಸಮಿತಿಯ ಪಕ್ಕದ ಆರ್.ವಿ. ಸಂಕನಗೌಡ್ರ ಬಯಲು ಜಾಗೆಯಲ್ಲಿ ಬಿಜೆಪಿಯ ಬಹಿರಂಗ ಪ್ರಚಾರ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಭಾಗವಹಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಬಾಗಲಕೋಟ ಸಂಸದ ಪಿ.ಸಿ. ಗದ್ದಿಗೌಡ್ರ, ಗದಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಬಿಜೆಪಿಯ ರೋಣ ವಿಧಾನಸಭಾ ಮತಕ್ಷೇತ್ರದ ಅಭ್ಯರ್ಥಿ ಕಳಕಪ್ಪ ಬಂಡಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ, ನರೇಗಲ್ಲ ಘಟಕದ ಬಿಜೆಪಿ ಅಧ್ಯಕ್ಷ ಉಮೇಶ ಸಂಗನಾಳಮಠ ಮುಂತಾದವರು ಆಗಮಿಸುವರೆಂದು ಪಪಂ ಸದಸ್ಯ ಶಶಿಧರ ಸಂಕನಗೌಡ್ರ ಹಾಗೂ ಬಿಜೆಪಿ ಮುಖಂಡ ಪುಟ್ಟಣ್ಣ ಹೊಸಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಿಡ್ನಿಯಲ್ಲಿ 112 ಗ್ರಾಂ ಕಲ್ಲು
ರೋಣ: ಪಟ್ಟಣದ ರಾಜೀವಗಾಂಧಿ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ವೈದ್ಯರು ನೀಲವ್ವ ನೂಲ್ವಿ (55) ಎಂಬ ಮಹಿಳೆಯ ಮೂತ್ರಜನಕಾಂಗದಲ್ಲಿದ್ದ 6 ಸೆಂ.ಮೀ. ಉದ್ದ, 5 ಸೆಂ.ಮೀ. ಅಗಲ ಹಾಗೂ 112 ಗ್ರಾಂ ಭಾರವಿರುವ ಕಲ್ಲನ್ನು ಭಾನುವಾರ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೊಂದು ವಿರಳ ಶಸ್ತ್ರಚಿಕಿತ್ಸೆ. ಕುಷ್ಟಗಿ ತಾಲೂಕು ಮೂಗನೂರ ಗ್ರಾಮದ ನೀಲವ್ವಗೆ ಎಂಟು ವರ್ಷಗಳಿಂದ ಸತತವಾಗಿ ಹೊಟ್ಟೆನೋವು ಬಾಧಿಸುತ್ತಿತ್ತು. ನೋವು ಕಂಡುಬಂದಾಗ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಗುಣವಾಗಿರಲಿಲ್ಲ. ಈಗ ಇಲ್ಲಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯಿಂದ ಗುಣವಾಗಿದ್ದಾರೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.