ಕಾಂಗ್ರೆಸ್‌ನಿಂದ ಮಾತ್ರ ಎಲ್ಲರ ಪ್ರಗತಿ ಸಾಧ್ಯ: ಸಿದ್ದರಾಮಯ್ಯ
ನರಗುಂದ: ದೇಶದಲ್ಲಿ ಹಲವಾರು ಪಕ್ಷಗಳಿವೆ. ಅದರಲ್ಲಿ ಎಲ್ಲ ವರ್ಗ, ಧರ್ಮದವರಿಗೆ ನ್ಯಾಯ ದೊರಕಿಸುವ ಪಕ್ಷವೆಂದರೆ ಅದು ಕಾಂಗ್ರಸ್ ಪಕ್ಷ ಮಾತ್ರ. ಹಾಗಾಗಿ ಎಲ್ಲರೂ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಅವರು ಭಾನುವಾರ ಪಟ್ಟಣದ ಗಾಂಧಿ ಚೌಕ್‌ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಹಲವಾರು ಪಕ್ಷಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಈ ಎಲ್ಲ ಪಕ್ಷಗಳು ತಮ್ಮ ವೈಯಕ್ತಿಕ ಹಿತಾಸಕ್ತಿ, ಸ್ವಾರ್ಥಕ್ಕೆ ಹುಟ್ಟಿಕೊಂಡಿರುವ ಪಕ್ಷಗಳಾಗಿವೆ. ಇವುಗಳು ಬಡವರ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸುವ ಪಕ್ಷಗಳಲ್ಲ. ಇವುಗಳು ದಿನಕ್ಕೊಂದು ತೆರನಾದ ಸೋಗು ಹಾಕಿಕೊಂಡು ಚುನಾವಣೆಯಲ್ಲಿ ಜನತೆಗೆ ತಪ್ಪು ಸಂದೇಶ ನೀಡಿ, ಮತ ದೋಚಲು ನೋಡುವ ಪಕ್ಷಗಳಾಗಿವೆ. ಈ ಭಾಗದಲ್ಲಿ ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಶಾಸಕ, ಸಚಿವರು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಇರುವುದು ನೋವಿನ ಸಂಗತಿ. ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳಾಗಬೇಕಾದಲ್ಲಿ ಈ ಬಾರಿ ಕಾಂಗ್ರೆಸ್‌ನ ಅಭ್ಯರ್ಥಿ ಬಿ.ಆರ್. ಯಾವಗಲ್‌ಗೆ ಮತ ನೀಡಿ ಅವರನ್ನು ಆಯ್ಕೆಗೊಳಿಸಿರಿ ಎಂದರು. ಈ ಬಾರಿ ಹಣದಿಂದ ಜನತೆಯನ್ನು ತಮ್ಮತ್ತ ಸೆಳೆದುಕೊಳ್ಳುತ್ತಿರುವ ಕೋಲಾರದ ವರ್ತೂರ ಪ್ರಕಾಶರವರ ಸಹೋದರ ವಿ. ರಮಾನಂದ ಈ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ಹಾಸ್ಯಾಸ್ಪದವಾಗಿದ್ದು, ಇಂಥವರನ್ನು ಮತದಾರರು ಹೀನಾಯವಾಗಿ ಸೋಲಿಸಬೇಕು ಎಂದರು. ಮಾಜಿ ಸಚಿವ ಬಿ.ಆರ್. ಯಾವಗಲ್, ಹೊಳೆ-ಆಲೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಶರಥ ಗಾಣಿಗೇರ, ಚಂಬಣ್ಣ ವಾಳದ, ಎಸ್.ಡಿ. ಕೊಳ್ಳಿ, ದ್ಯಾಮಣ್ಣ ಸವದತ್ತಿ, ರಾಜು ಕಲಾಲ, ಗಿರೀಶ ಪಾಟೀಲ, ಬಿ.ಸಿ. ಬ್ಯಾಳಿ, ರವಿ ದಂಡಿನ, ಡಾ. ಎಸ್.ಎಚ್. ಹುರಳಿ, ವಿಠ್ಠಲ ಶಿಂಧೆ, ಎಫ್.ವೈ. ದೊಡಮನಿ ಮುಂತಾದವರು ಉಪಸ್ಥಿತರಿದ್ದರು.