ದ್ವಿಪಕ್ಷ: ರಾಷ್ಟ್ರಕ್ಕೆ ಉತ್ತಮ ಆಡಳಿತ
ರಾಣಿಬೆನ್ನೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎರಡು ಪಕ್ಷಗಳು ಇದ್ದಾಗ ಮಾತ್ರ ದೇಶದ ಜನತೆಗೆ ಉತ್ತಮ ಆಡಳಿತ ನೀಡಲು ಸಾಧ್ಯವಾಗುತ್ತದೆ ಎಂದು ಬಿಜೆಪಿ ಮುಖಂಡ, ಮಾಜಿ ಉಪ ಪ್ರಧಾನಿ ಲಾಲಕೃಷ್ಣ ಆಡ್ವಾಣಿ ಹೇಳಿದರು.
ಭಾನುವಾರ ಸ್ಥಳೀಯ ಬಿ.ಟಿ. ಪಾಟೀಲ ಮೈದಾನದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಬಹಿರಂಗ ಪ್ರಚಾರ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ದುರದೃಷ್ಟವಶಾತ್ ದೇಶದಲ್ಲಿ ಅನೇಕ ಪಕ್ಷಗಳಿವೆ ಎಂದು ವಿಷಾದದಿಂದ ನುಡಿದ ಅವರು, ಪಕ್ಷಗಳು ಸಾಕಷ್ಟಿದ್ದರೂ ದೆಹಲಿಯ ಆಡಳಿತದ ಚುಕ್ಕಾಣಿ ಹಿಡಿಯಲು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಅಥವಾ ಕಾಂಗ್ರೆಸ್ನ ಬೆಂಬಲ ಬೇಕೆಬೇಕು. ಕರ್ನಾಟಕದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಭೂತಪೂರ್ವ ಗೆಲವು ತಂದುಕೊಡುವ ಮೂಲಕ ಬಲಿಷ್ಠಗೊಳಿಸಬೇಕೆಂದರು.
ಪ್ರಮುಖ ಪ್ರತಿಪಕ್ಷ: ದೆಹಲಿಯಲ್ಲಿ ಬಿಜೆಪಿ ಪ್ರಮುಖ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸುತ್ತಿದೆ. ಲೋಕಸಭೆಯಲ್ಲಿ ಸುಷ್ಮಾ ಸ್ವರಾಜ್ ಹಾಗೂ ರಾಜ್ಯಸಭೆಯಲ್ಲಿ ಅರುಣ ಜೆಟ್ಲಿ ಪ್ರತಿಪಕ್ಷ ನಾಯಕರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿಪಕ್ಷದಲ್ಲಿದ್ದರೂ ಸರ್ಕಾರ ತಮ್ಮ ಸದಸ್ಯರ ಮಾತನ್ನು ಅಲಕ್ಷಿಸುವ ಧೈರ್ಯ ಮಾಡುವುದಿಲ್ಲ. ಸದನದಲ್ಲಿ ಬಿಜೆಪಿ ಸದಸ್ಯರು ಮಾತನಾಡಲಾರಂಭಿಸಿದರೇ ಸಾಕು ಇಡೀ ಸದಸ್ಯರು ಗಮನವಿಟ್ಟು ಕೇಳುತ್ತಾರೆ. ಇದಕ್ಕೆ ನಮ್ಮ ಪಕ್ಷದ ತತ್ವ, ಸಿದ್ಧಾಂತವೇ ಕಾರಣ ಎಂದರು.
ಮಾದರಿ ರಾಜ್ಯಕ್ಕೆ: ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಎಂದರೆ ಗುಜರಾತ್ ಎಂದು ಪ್ರತಿಯೊಬ್ಬರು ಹೇಳುತ್ತಾರೆ. ದ. ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ಜನಪರ ಕಾರ್ಯಗಳ ಮೂಲಕ ಜನರ ಮನಗೆದ್ದಿದೆ. ಆದ್ದರಿಂದ ಮತ್ತಷ್ಟು ಅಭಿವೃದ್ಧಿಗೆ ಬಿಜೆಪಿಗೆ ಬೆಂಬಲಿಸುವಂತೆ ಆಡ್ವಾಣಿ ಕೋರಿದರು.
ಉತ್ತಮ ಆಡಳಿತ: ಸಿಎಂ ಜಗದೀಶ ಶೆಟ್ಟರ್ ಉತ್ತಮ ಆಡಳಿತ ನೀಡಿದ್ದಾರೆ ಎಂದು ಬಣ್ಣಿಸಿದ ಆಡ್ವಾಣಿ, ಅಭಿವೃದ್ಧಿ ವಿಷಯ ಬಂದಾಗ ಗುಜರಾತ್ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಹಾಗೆಯೇ ಛತ್ತಿಸಗಢ, ಉತ್ತರಾಖಂಡ ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದ ನಂತರ ಸಾಕಷ್ಟು ಅಭಿವೃದ್ಧಿ ಕಾರ್ಯಕೈಗೊಳ್ಳುವ ಮೂಲಕ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಸಕ್ತ ವಿಧಾನಸಭೆ ಚುನಾಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾದಲ್ಲಿ ಉತ್ತಮ ಆಡಳಿತ ನೀಡುವುದರ ಜನತೆ ದೇಶದಲ್ಲಿ ಕರ್ನಾಟಕ ಅಭಿವೃದ್ಧಿಯಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆ ಎಂದರು.
ಸುಂದರ ನಗರಗಳು: ಅಖಂಡ ಭಾರತದ ಕರಾಚಿಯಲ್ಲಿ ತಾವು ಜನಿಸಿದ್ದೇವು. ತಮಗೆ ಅತ್ಯಂತ ಪ್ರೀಯ ರಾಜ್ಯಗಳಲ್ಲಿ ಕರಾಚಿ ಸೇರಿದಂತೆ ಬೆಂಗಳೂರು ಒಂದಾಗಿದೆ ಎಂದ ಆಡ್ವಾಣಿ, ತುರ್ತು ಪರಿಸ್ಥಿತಿ ಸಂದರ್ಭ ಪಾರ್ಲಿಮೆಂಟ್ರಿ ಕಮಿಟಿ ಸಭೆಗಾಗಿ ಮಾಜಿ ಪ್ರಧಾನಿ ವಾಜಪೇಯಿ ಅವರೊಂದಿಗೆ ಬೆಂಗಳೂರಿಗೆ ಬಂದಿದ್ದೆವು. ಆಗ ಪಕ್ಷಾಂತರ ಜನರನ್ನು ಬಂಧಿಸಲಾಗಿತ್ತು. ಇದೇ ರೀತಿ ತಮಗೆ, ವಾಜಪೇಯಿ ಅವರನ್ನು ಬಂಧಿಸಿ ಸೆಂಟ್ರಲ್ ಜೈಲ್ನಲ್ಲಿರಿಸಲಾಗಿತ್ತು. 19 ತಿಂಗಳು ಜೈಲಿನಲ್ಲಿದ್ದಾಗ ಕನ್ನಡ ಭಾಷೆ ಕಲಿಯಲು ಪ್ರಯತ್ನಿಸಿದ್ದೆವು. ಇನ್ನೂ 2-3 ತಿಂಗಳಲ್ಲಿ ಜೈಲಿನಲ್ಲೇ ಇಟ್ಟಿದ್ದರೆ ಬಹುಶಃ ಇಂದು ನಾನು ಕನ್ನಡದಲ್ಲೇ ಭಾಷಣ ಮಾಡುತ್ತಿದ್ದೆ ಎಂದೂ ಹಾಸ್ಯ ಭರಿತರಾಗಿ ಹಳೆಯ ನೆನಪುಗಳನ್ನು ತೆರೆದಿಟ್ಟರು.
ಯುದ್ಧಕ್ಕೆ ಸಿದ್ಧ: ತತ್ವ-ಸಿದ್ಧಾಂತಕ್ಕೆ ಹೆಸರುವಾಸಿಯಾಗಿರುವ ಬಿಜೆಪಿ ಯಾವುದೇ ಕಾರಣಕ್ಕೂ ಭಯೋತ್ಪಾದನೆ ಸಹಿಸುವುದಿಲ್ಲ. ಪಾಕಿಸ್ತಾನದ ಅಧ್ಯಕ್ಷ ಮುಷ್ರಫ ಅವರಿಗೆ ತಾವು ಯುದ್ಧಕ್ಕೆ ಸಿದ್ಧರಾಗಿದ್ದೇವೆ. ಆದರೆ, ಭಯೋತ್ಪಾದನೆ ಕೃತ್ಯಕ್ಕೆ ಮುಂದಾದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂಬ ಎಚ್ಚರಿಕೆ ನೀಡಿದ್ದೇವು ಎಂದ ಆಡ್ವಾಣಿ, ಸುಭದ್ರ ಹಾಗೂ ಸ್ವಚ್ಛ ಆಡಳಿತಕ್ಕೆ ಬಿಜೆಪಿಗೆ ಬೆಂಬಲಿಸುವಂತೆ ವಿನಂತಿಸಿಕೊಂಡರು.
ಕೇಂದ್ರದಿಂದ ತಾರತಮ್ಯ: ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಕೇಂದ್ರ ಸರ್ಕಾರ, ರಾಜ್ಯಕ್ಕೆ ನೀಡಬೇಕಿರುವ ಸೌಲಭ್ಯ ಕೊಡಲು ಪ್ರತಿ ಬಾರಿಯೂ ತಾರತಮ್ಯ ನೀತಿ ಅನುಸರಿಸಿದೇ ಎಂದ ಜೋಶಿ, ಚುನಾವಣೆ ದೃಷ್ಟಿಕೋನವಿಟ್ಟುಕೊಂಡು ಕೇಂದ್ರದ ಯುಪಿಎ ಸರ್ಕಾರ, ರಾಜ್ಯಕ್ಕೆ ಪೂರೈಸಬೇಕಿರುವ ಅಕ್ಕಿ, ಗೋಧಿಯಲ್ಲಿ ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿರುವ ಯುಪಿಎ, ಏಪ್ರಿಲ್ ತಿಂಗಳಿಂದ 28 ಸಾವಿರ ಮೆಟ್ರಿಕ್ ಟನ್ ಅಕ್ಕಿ ಹಾಗೂ 10 ಸಾವಿರ ಮೆಟ್ರಿಕ್ ಟನ್ ಗೋಧಿ ಪೂರೈಕೆಯನ್ನು ಉದ್ದೇಶಪೂರ್ವಕವಾಗಿ ತಡೆ ಹಿಡಿದಿದೆ. ವಿದ್ಯುತ್ ಪೂರೈಕೆ, ಕಾವೇರಿ ನದಿ ನೀರು ಹಂಚಿಕೆ ಸೇರಿದಂತೆ ಪ್ರತಿಯೊಂದರಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದರು.