ಬಿರುಸುಗೊಂಡ ಚುನಾವಣಾ ಪ್ರಚಾರ
ಕನ್ನಡಪ್ರಭ ವಾರ್ತೆ, ಗದಗ, ಏ. 21
ಮೇ 5 ರಂದು ಜರುಗುತ್ತಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದ್ದು, ಜಿಲ್ಲೆಯಾದ್ಯಂತ ಬಿರು ಬಿಸಿಲಲ್ಲಿಯೂ ಪ್ರಚಾರದ ಕಾವು ಏರುತ್ತಿದೆ.
ಮೇ 20ರಂದು ರಾಜ್ಯ ಚುನಾವಣಾ ಆಯೋಗವು ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರ ಪರಿಶೀಲಿಸಿ ಅಂತಿಮ ಹೆಸರುಗಳನ್ನು ಪ್ರಕಟಿಸಿದ್ದು, ಈಗ ಜಿಲ್ಲೆಯಲ್ಲಿ ಅಥೆಂಟಿಕೇಟೆಡ್ ಅಖಾಡ ರೆಡಿಯಾಗಿದ್ದು, ಎಲ್ಲ ಪಕ್ಷದ ಅಭ್ಯರ್ಥಿಗಳು ಹುರುಪಿನಿಂದ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.
ಈಗಾಗಲೇ ಜಿಲ್ಲೆಯಾದ್ಯಂತ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆದಿದೆ. ರೋಣ, ನರಗುಂದ, ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳಿಗಿಂತ ಅವರ ಪತ್ನಿ, ಸೊಸೆಯಂದಿರು ಹೆಚ್ಚಿನ ಪ್ರಚಾರ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಗದಗನಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಅನಿಲ ಮೆಣಸಿನಕಾಯಿ ನಗರದ ವಾರ್ಡ್‌ಗಳಲ್ಲಿ ಪಾದಯಾತ್ರೆ ಮೂಲಕ ಮತಯಾಚಿಸುತ್ತಿದ್ದಾರೆ. ಅಲ್ಲದೆ ಕಾರ್ಯಕರ್ತರ ಮನೆಯಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ. ಎಚ್.ಕೆ. ಪಾಟೀಲರು ಅವಳಿ ನಗರದ ಪ್ರಮುಖ ಸ್ಥಳಗಳಲ್ಲಿ ಪಾದಯಾತ್ರೆಯ ಮೂಲಕ ಮತಯಾಚನೆ ಮಾಡುತ್ತಿದ್ದಾರೆ. ಶ್ರೀಶೈಲಪ್ಪ ಬಿದರೂರ ಸಭೆಗಳನ್ನು ನಡೆಸಿ, ಪ್ರಚಾರ ಕೈಗೊಂಡು ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.
ಗೊಂದಲದಲ್ಲಿ ಮತದಾರರು: ಎಲ್ಲ ಪಕ್ಷದ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಅನ್ಯ ಪಕ್ಷಗಳು ನಡೆಸಿದ ಹಗರಣ ಸೇರಿದಂತೆ ಆರೋಪ, ಪ್ರತ್ಯಾರೋಪಗಳ ಬಗ್ಗೆ ಮಾತನಾಡುತ್ತಿದ್ದು, ಇದು ಸಹಜವಾಗಿ ಮತದಾರರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಅಭ್ಯರ್ಥಿಗಳು ಬೆಳಗಾಗುತ್ತಿದ್ದಂತೆ ಜನರ ಮನೆ ಬಾಗಿಲಿಗೆ ಬಂದು ಮತ ಹಾಕುವಂತೆ ವಿನಂತಿಸುತ್ತಿದ್ದಾರೆ. ಅವರವರ ಪಕ್ಷಗಳು ಮಾಡಿದ ಸಾಧನೆಯನ್ನು ವಿವರಿಸಿ ಮತದಾರರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಒಬ್ಬರೊಂದಿಗೆ ಮಾತನಾಡಿ ಮನೆಯೊಳಗೆ ಬರುತ್ತಿದ್ದಂತೆ ಮತ್ತೊಬ್ಬರು ಬರುತ್ತಾರೆ. ಹೀಗೆ ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಎಲ್ಲ ಅಭ್ಯರ್ಥಿಗಳ ಮನವಿ, ಪ್ರಚಾರದ ಭರಾಟೆಯಿಂದ ಸಾರ್ವಜನಿಕರೇ ಸುಸ್ತಾಗಿದ್ದಾರೆ.
ಕಾರ್ಯಕರ್ತರಿಗೆ ಬೇಡಿಕೆ: ಈಗ ಚುನಾವಣಾ ಪ್ರಚಾರಕ್ಕೆ ಬಾಡಿಗೆ ಕಾರ್ಯಕರ್ತರಿಗೆ ಎಲ್ಲಿಲ್ಲದ ಬೇಡಿಕೆ. ಕೆಲವರಿಗೆ ಉದ್ಯೋಗ ದೊರೆತಂತಾಗಿ ಆದಾಯ ಗಳಿಸಲು ದಾರಿ ಮಾಡಿಕೊಟ್ಟಂತಿದೆ. ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ, ಮತಯಾಚಿಸಲು ಪಾದಯಾತ್ರೆ, ಸ್ಟಾರ್ ಕ್ಯಾಂಪೇನರ್‌ಗಳು ಬಂದಾಗ ಹೆಚ್ಚಿನ ಜನ ತೋರಿಸಲು, ಅವರ ಮುಂದೆ ಅಭ್ಯರ್ಥಿ ಪರ ಜಯಘೋಷ ಹಾಕಲು ಈ ಕಾರ್ಯಕರ್ತರಿಗೆ ಹೆಚ್ಚಿನ ಡಿಮ್ಯಾಂಡ್ ಬಂದಿದೆ.
ಮಾತೇ ಬಂಡವಾಳ: ಈ ಬಾರಿಯ ಚುನಾವಣೆಯಲ್ಲಿ ಕೇವಲ ಮಾತೇ ಬಂಡವಾಳವಾಗಿದೆ. ಪ್ರಚಾರಕ್ಕೆ ಬರುವ ಪ್ರತಿಯೊಬ್ಬರೂ ತಮ್ಮ ತಮ್ಮ ಪಕ್ಷಗಳ ಸಾಧನೆ ಹೇಳಿದರೆ, ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳು ಅವರ ಪಕ್ಷಗಳ ಸಂಸ್ಥಾಪಕರು ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ತಿಳಿಸಿ ಮತ ಕೇಳುತ್ತಿದ್ದಾರೆ. ಒಟ್ಟಿನಲ್ಲಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಪ್ರಚಾರವನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಈ ಚುನಾವಣೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗಿಂತ ಮಾತೇ ಹೆಚ್ಚಿನ ಬಂಡವಾಳವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ.
-ಶಿವಕುಮಾರ ಕುಷ್ಟಗಿ