ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬೈರಾಪುರ ತಾಂಡಾಕ್ಕೆ ಮತಗಟ್ಟೆ ನೀಡಿ

Lingaraj Badiger
Updated On : 22 Apr 2013, 12:19 pm

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಏ. 21
ಸಮೀಪದ ದಕ್ಷಿಣ ಕಾಶಿ ಪ್ರಸಿದ್ಧಿಯ ಕಾಲಕಾಲೇಶ್ವರ ದೇಗುಲ ಬೆಟ್ಟದ ಮೇಲ್ಭಾಗದಲ್ಲಿರುವ ಕುಗ್ರಾಮ ಬೈರಾಪುರ ತಾಂಡಾಕ್ಕೆ ಮತಗಟ್ಟೆ ಕೇಂದ್ರ ಸ್ಥಾಪಿಸಬೇಕೆಂದು ತಾಂಡಾ ನಿವಾಸಿಗಳು ಆಗ್ರಹಿಸಿದ್ದಾರೆ.
ರೋಣ ಮತಕ್ಷೇತ್ರದ ಕಟ್ಟ ಕಡೆಯ ಭಾಗದಲ್ಲಿರುವ ಬೈರಾಪುರ ತಾಂಡಾಕ್ಕೆ ಇಂದಿಗೂ ಸಮರ್ಪಕ ಮೂಲ ಸೌಲಭ್ಯ ಮರೀಚಿಕೆಯಾಗಿದೆ. ಸ್ವಾತಂತ್ರ್ಯದೊರೆತು 6 ದಶಕ ಕಳೆದರೂ ಗ್ರಾಮಕ್ಕೆ ಕುಡಿಯುವ ನೀರು, ವ್ಯದ್ಯಕೀಯ ಹಾಗೂ ಇನ್ನಿತರ ಸೌಕರ್ಯಗಳಿಲ್ಲ. ಅನಾರೋಗ್ಯದಿಂದ ಬಳಲುವವರು, ಗರ್ಭಿಣಿಯರು, ಆಕಸ್ಮಿಕ ಅವಘಡಗಳಿಗೆ ತುತ್ತಾದವರ ಪಾಡು ಹೇಳತೀರದು. ರಸ್ತೆ ಇದೆ. ವಾಹನ ವ್ಯವಸ್ಥೆ ಇಲ್ಲ. ರಾತ್ರಿ ಸಮಯದಲ್ಲಿ ಖಾಸಗಿ ವಾಹನಗಳು ಇರದಿರುವುದು ವೃದ್ಧರು, ಮಹಿಳೆಯರು ಅನಾರೋಗ್ಯಕ್ಕೆ ತುತ್ತಾದರೆ ಆಸ್ಪತ್ರೆಗೆ ಸಾಗಿಸುವುದು ಕಷ್ಟದ ಕೆಲಸ ಎಂದು ಆಡಳಿತ ವ್ಯವಸ್ಥೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಮತದಾನ ಮಾಡಲು ಗ್ರಾಮದಲ್ಲಿ ಮತಗಟ್ಟೆ ಸ್ಥಾಪಿಸಬೇಕೆಂದು ಹಲವಾರು ವರ್ಷಗಳಿಂದ ಕೇಳುತ್ತಿದ್ದರೂ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ಜನರು ದೂರಿದರು. ಈ ಬಾರಿ ಬೈರಾಪುರ ತಾಂಡಾಕ್ಕೆ ಮತಗಟ್ಟೆ ಸ್ಥಾಪಿಸದಿದ್ದಲ್ಲಿ  ಗ್ರಾಮಸ್ಥರು ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ. ಮತ ಚಲಾಯಿಸಲು ತಾಂಡಾದಿಂದ ಬೈರಾಪುರಕ್ಕೆ 2 ಕಿಲೋ ಮೀಟರ್ ನಡೆದುಕೊಂಡು ಹೋಗಬೇಕಾಗುತ್ತದೆ. ರಾಜಕಾರಣಿಗಳಿಗೆ ಚುನಾವಣಾ ಸಂದರ್ಭದಲ್ಲಿ ಮಾತ್ರ ತಾಂಡಾದ ನೆನಪಾಗುತ್ತದೆ. ಮತ ಪಡೆಯುವವರೆಗೆ ಭರವಸೆ ನೀಡಿ, ಆರಿಸಿ ಬಂದ ಬಳಿಕ ಇತ್ತ ತಿರುಗಿಯೂ ನೋಡುವುದಿಲ್ಲ. ಬರ ಬಿದ್ದ ಹಿನ್ನೆಲೆಯಲ್ಲಿ ಈಗಾಗಲೇ ತಾಂಡಾದ ಎಷ್ಟೋ ಕುಟುಂಬಗಳು ಹೊಟ್ಟೆ ಪಾಡಿಗಾಗಿ ಗುಳೆ ಹೋಗಿದ್ದಾರೆ. ಗ್ರಾಮದಲ್ಲಿ ನೂರಾರು ಮನೆಗಳಿದ್ದು ಸುಮಾರು 350ಕ್ಕೂ ಅಧಿಕ ಮತದಾರರಿದ್ದಾರೆ.  ಚುನಾವಣಾ ಆಯೋಗ ಈ ಬಾರಿಯಾದರೂ ಬೈರಾಪುರ ತಾಂಡಾದಲ್ಲಿ ಮತಗಟ್ಟೆ ಸ್ಥಾಪಿಸಿ, ಗ್ರಾಮಸ್ಥರಿಗೆ ಹಕ್ಕು ಚಲಾಯಿಸಲು ಅನುಕೂಲ ಮಾಡಿಕೊಡುವುದೋ ಎಂಬುವುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement