ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಾಲ ಮನ್ನಾದಲ್ಲೂ ದುಡ್ಡು ಹೊಡೆದ ಕಾಂಗ್ರೆಸ್

Lingaraj Badiger
Updated On : 22 Apr 2013, 12:23 pm

ಕನ್ನಡಪ್ರಭ ವಾರ್ತೆ, ಗದಗ, ಏ. 21
ಸಾಲು ಸಾಲು ಹಗರಣಗಳಲ್ಲಿ ಮುಳುಗಿರುವ ಕೇಂದ್ರದ ಯುಪಿಎ ಸರ್ಕಾರ, ರೈತರ ಸಾಲ ಮನ್ನಾದಂತಹ ಪವಿತ್ರ ಕೆಲಸದಲ್ಲಿಯೂ ದುಡ್ಡು ಹೊಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ಪ್ರಹ್ಲಾದ ಜೋಶಿ ಆರೋಪಿಸಿದರು.
ಭಾನುವಾರ ನಗರದ ವೀರೇಶ್ವರ ಪುಣ್ಯಾಶ್ರಮದ ಸಭಾಭವನದಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಮನ್ವೆಲ್ತ್, 2ಜಿ, ಆದರ್ಶ ವಸತಿ ಯೋಜನೆ ಹಗರಣಗಳನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರವೇ ಮಾಡಿದೆ. ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ರಾಜ್ಯಕ್ಕೆ ಬರುವ ಯೋಜನೆಗಳಲ್ಲೂ ಕ್ಯಾತೆ ತೆಗೆಯುತ್ತ ಅನ್ಯಾಯ ಮಾಡುತ್ತಿದೆ. ಇದೆಲ್ಲ ರಾಜ್ಯದ ಕಾಂಗ್ರೆಸ್ ನಾಯಕರಿಗೆ ಕಾಣುತ್ತಿಲ್ಲ. ಬಿಜೆಪಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಹಿಸದೆ ಅನಗತ್ಯ ಟೀಕೆ ಮಾಡುತ್ತಿದ್ದಾರೆ. ಇದಕ್ಕೆ ಸದ್ಯದಲ್ಲಿಯೇ ಜನತೆ ಮತದಾನದ ಮೂಲಕ ಉತ್ತರಿಸಲಿದ್ದಾರೆಂದರು.
ತಾಕತ್ತಿದ್ರೆ ಸಿಎಂ ಅಭ್ಯರ್ಥಿ ಘೋಷಿಸಿ: ಬಿಜೆಪಿಯಿಂದ ಮುಂದಿನ ಸಿಎಂ ಜಗದೀಶ ಶೆಟ್ಟರ್ ಎಂದು ಘೋಷಣೆ ಮಾಡಿದ್ದೇವೆ. ಕಾಂಗ್ರೆಸ್‌ನವರಿಗೆ ತಾಕತ್ತಿದ್ದರೆ ಸಿಎಂ ಅಭ್ಯರ್ಥಿ ಘೋಷಿಸಲಿ ಎಂದು ಸವಾಲು ಹಾಕಿದರು. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಭಿನ್ನಾಭಿಪ್ರಾಯಗಳು ಮೂಡಿವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೈಗೊಂಡ ಯೋಜನೆಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳ ಆಧಾರದಲ್ಲಿ ಮತ್ತೊಮ್ಮೆ ಸ್ವಂತ ಬಲದಲ್ಲಿಯೇ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
ನಾವು ಕಲ್ಲು ಹಾಕಿ ಹೋಗುವವರಲ್ಲ: ಕಾಂಗ್ರೆಸ್‌ನಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿ ಕೇವಲ ಕಲ್ಲು ಹಾಕಿ ಹೋಗುವವರಲ್ಲ. ನಾವೇ ಅಡಿಗಲ್ಲು ಹಾಕಿ, ನಮ್ಮ ಅವಧಿಯಲ್ಲಿಯೇ ಆ ಯೋಜನೆಯನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಿದ್ದೇವೆ. ಗದುಗಿನಲ್ಲಿ ಇದಕ್ಕೆ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ರು. 19 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಜಿಲ್ಲಾಸ್ಪತ್ರೆಯನ್ನು ನಾವೇ ಶಿಲಾನ್ಯಾಸ ಮಾಡಿ, ಉದ್ಘಾಟಿಸಿದ್ದೇವೆ ಎಂದು ಟಾಂಗ್ ನೀಡಿದರು.
ನಮ್ದು ಯುವಕರ ಪಕ್ಷ: ಮಾತೆತ್ತಿದರೆ ಕಾಂಗ್ರೆಸ್‌ನವರು ತಮ್ಮದು ಇತಿಹಾಸವಿರುವ ಪಕ್ಷ, 124 ವರ್ಷ ದೇಶಕ್ಕಾಗಿ ಸೇವೆ ಮಾಡಿದ್ದೇವೆ. ಬಿಜೆಪಿ ಈಗಷ್ಟೇ ಹುಟ್ಟಿದ್ದು ಎಂದು ಲೇವಡಿ ಮಾಡುತ್ತಾರೆ. ಅವರ ಪಕ್ಷಕ್ಕೆ ವಯಸ್ಸಾಗಿದೆ. ಸೊಂಟ, ಹಲ್ಲು ಬಿದ್ದುಹೋಗಿವೆ. ನಮ್ಮ ಪಕ್ಷಕ್ಕೆ 34ರ ಹರೆಯ. ಯಂಗ್ ಪಾರ್ಟಿ. ಈ ದೇಶಕ್ಕೆ ಯುವಕರ ನಾಯಕತ್ವ ಬೇಕಾಗಿದೆ. ಹಾಗಾಗಿ 100ಕ್ಕೂ ಹೆಚ್ಚು ಯುವಕರಿಗೆ ಟಿಕೆಟ್ ನೀಡಿದ್ದೇವೆ ಎಂದರು.
ಶಾಸಕ ಶ್ರೀಶೈಲಪ್ಪ ಬಿದರೂರ, ವಿಪ ಸದಸ್ಯ ನಾರಾಯಣಸಾ ಬಾಂಡಗೆ ಮಾತನಾಡಿದರು. ಸಿ.ಸಿ. ಪಾಟೀಲರ ಪುತ್ರ ಉಮೇಶಗೌಡ ಪಾಟೀಲ, ಜಿ.ಪಿ. ಪಾಟೀಲ, ಚಂದ್ರು ದಂಡೀನ, ಎಂ.ಎಸ್. ಕರಿಗೌಡ್ರ, ಶ್ರೀಕಾಂತ ಖಟವಟೆ, ಆನಂದ ಶೇಠ್ ಇದ್ದರು. ಇದಕ್ಕೂ ಮೊದಲು ನಗರದ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿದ ಜೋಶಿ ಗದಗ ಬಿಜೆಪಿಯಲ್ಲಿ ಉಂಟಾಗಿದ್ದ ಬಂಡಾಯ ಶಮನ ಮಾಡುವಲ್ಲಿ ಯಶಸ್ವಿಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement