ಸಿ.ಸಿ. ಪಾಟೀಲ್ ಪುತ್ರ ಉಮೇಶಗೌಡ ಮತ ಯಾಚನೆ
ರೋಣ: ನರಗುಂದ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಸಿ. ಪಾಟೀಲ ಪರ ಅವರ ಪುತ್ರ ಉಮೇಶಗೌಡ ಪಾಟೀಲ ಕ್ಷೇತ್ರ ವ್ಯಾಪ್ತಿಯ ತಾಲೂಕಿನ ಮೆಣಸಗಿ, ಅಸೂಟಿ, ಹೊನ್ನಾಪುರ, ಸಂದಿಗವಾಡ ಮತ್ತು ಮಲ್ಲಾಪುರ ಗ್ರಾಮಗಳಿಗೆ ಕಾರ್ಯಕರ್ತರೊಂದಿಗೆ ತೆರಳಿ ಶನಿವಾರ ಮತಯಾಚಿಸಿದರು.
ಈ ಸಂದರ್ಭದಲ್ಲಿ ಉಮೇಶಗೌಡ ಪಾಟೀಲ ಮಾತನಾಡಿ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಚುನಾವಣೆ ಎದುರಿಸುತ್ತಿದ್ದಾರೆ. ಆದರೆ, ನರಗುಂದ ಕ್ಷೇತ್ರದಲ್ಲಿ ಅಭ್ಯರ್ಥಿ ಪರವಾಗಿ ಕಾರ್ಯಕರ್ತರು ಚುನಾವಣೆ ಎದುರಿಸುತ್ತಿದ್ದಾರೆ. ನಮ್ಮ ತಂದೆಯವರು ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಾ ಬಂದವರಾಗಿದ್ದಾರೆ. ಆದರೆ, ಈಗ ಅವರು ಆಸ್ಪತ್ರೆಯಲ್ಲಿರುವುದರಿಂದ ನಾನೊಬ್ಬ ಕಾರ್ಯಕರ್ತನಾಗಿ ನಿಮ್ಮಲ್ಲಿಗೆ ಬಂದು ಮತಯಾಚನೆ ಮಾಡುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದದಿಂದ ಕಳೆದ 2 ಅವಧಿಗೆ ನಮ್ಮ ತಂದೆಯವರು ಶಾಸಕರಾಗಿ, ಸಚಿವರಾಗಿ ಕಾರ್ಯಮಾಡಿದ್ದನ್ನು ನೀವು ನೋಡಿದ್ದೀರಿ. ಆದ್ದರಿಂದ ನಮ್ಮ ತಂದೆಯವರಿಗೆ ಮತ್ತೊಮ್ಮೆ ತಮ್ಮೆಲ್ಲರ ಸೇವೆಗೆ ಅವಕಾಶ ಕಲ್ಪಿಸಿ ಕೊಡಿ ಎಂದು ಭಾವುಕರಾಗಿ ವಿನಂತಿಸಿದರು. ನರಗುಂದ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿ ಮಾಡುವುದು ನನ್ನ ಗುರಿ ಎಂದು ಪದೇ ಪದೇ ಹೇಳುತ್ತಿದ್ದ ನಮ್ಮ ತಂದೆಯ ಕನಸನ್ನು ನನಸಾಗಿಸುವುಲ್ಲಿ ಜನತೆಯ ಆಶೀರ್ವಾದ ಅವಶ್ಯವಾಗಿದೆ ಎಂದರು. ವಸಂತ ಮೇಟಿ, ವೀರಪಾಕ್ಷಗೌಡ ಪಾಟೀಲ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ಜಿ.ಪಿ. ಪಾಟೀಲ, ಸೋಮನಗೌಡ ಹುಡೇದಮನಿ, ತಾಪಂ ಸದಸ್ಯ ಶಿವಕುಮಾರ ನೀಲಗುಂದ, ಸುರೇಶಗೌಡ ಪಾಟೀಲ, ಸುರೇಶ ಸುರಕೋಡ, ಶಿವಾನಂದ ಕಮತಿ, ವೀರೂಪಾಕ್ಷಗೌಡ ಪಾಟೀಲ, ರಾಜುಗೌಡ ಪಾಟೀಲ, ಕುಬೇರಗೌಡ ಪಾಟೀಲ, ತಿಪ್ಪಣಗೌಡ ಹುಲ್ಲೂರ, ಎಸ್.ವಿ. ಸುಗ್ಗಿ, ನಾಗಪ್ಪ ಚಲವಾದಿ ಮುಂತಾದವರು ಉಪಸ್ಥಿತರಿದ್ದರು.
--