ಭ್ರಷ್ಟಾಚಾರ ಹೆಚ್ಚಳಕ್ಕೆ ಕಾಂಗ್ರೆಸ್, ಬಿಜೆಪಿ ಹೊಣೆ
ಕನ್ನಡಪ್ರಭ ವಾರ್ತೆ, ಗದಗ, ಏ. 22
ರಾಷ್ಟ್ರಮಟ್ಟದಲ್ಲಿ ಭ್ರಷ್ಟಾಚಾರ ಮಿತಿಮೀರಲು ಈ ದೇಶವನ್ನಾಳಿದ ಕಾಂಗ್ರೆಸ್ ಹಾಗೂ ಬಿಜೆಪಿ ನೇರ ಹೊಣೆ. ಈ ಎರಡೂ ಪಕ್ಷಗಳನ್ನು ಸೋಲಿಸಿ, ಈ ದೇಶದ ಹಿತಕಾಯಲು ಮತದಾರರು ಸನ್ನದ್ಧರಾಗಬೇಕು ಎಂದು ಗದಗ ವಿಧಾನಸಭಾ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಂದಾನಯ್ಯ ಕುರ್ತಕೋಟಿಮಠ ಹೇಳಿದರು.
ಅವರು ಸೋಮವಾರ ನಗರದ ಕನ್ಯಾಳ ಅಗಸಿಯಲ್ಲಿ ಕಾಂಗ್ರೆಸ್, ಬಿಜೆಪಿ ತೊರೆದ ಮಹಿಳೆಯರನ್ನು ಹಾಗೂ ಯುವ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು. ಗದಗ ವಿಧನಸಭಾ ಮತಕ್ಷೇತ್ರದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಜಾತಿ ರಾಜಕಾರಣ ನಡೆಯುತ್ತಿದೆ. ಈ ಹಿಂದೆ ಆಡಳಿತ ನಡೆಸಿದವರು ಈ ಬಾರಿ ಹಣಬಲ, ತೋಳ್ಬಲದಿಂದ ಹಾಗೂ ಅಲ್ಪಸಂಖ್ಯಾತರ ಹೆಸರಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಹವಣಿಸುತ್ತಿದ್ದಾರೆ ಎಂದರು. ಜಿಲ್ಲಾ ವಕ್ತಾರ ದಾವಲ್ ಮುಳಗುಂದ, ಜಿಲ್ಲಾ ಯುವ ಅಧ್ಯಕ್ಷ ರಮೇಶ ಕಲಬುರ್ಗಿ, ತಾಲೂಕು ಯುವ ಅಧ್ಯಕ್ಷ ಶಿವರಾಜಗೌಡ ಹಿರೇಮನಿ ಪಾಟೀಲ, ಅಂಬಾಜಿ ದಹಿಂಡೆ, ಮುತ್ತಣ್ಣ ಮಡಿವಾಳರ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಪ್ರಭುಗೌಡ ಪಾಟೀಲ, ಅಬ್ದುಲ್ ನರಸಾಪುರ, ವಿಷ್ಣು ಅರವಟಗಿ ಮುಂತಾದವರು ಪಾಲ್ಗೊಂಡಿದ್ದರು.