ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕೆರೆಗಳಿಗೆ ಬಾರದ ನೀರು: ತಪ್ಪದ ಗೋಳು

Rashmi Kasaragodu
Updated On : 24 Apr 2013, 11:00 am

ಎಸ್.ಜಿ. ತೆಗ್ಗಿನಮನಿ
ಕನ್ನಡಪ್ರಭ ವಾರ್ತೆ, ನರಗುಂದ, ಏ. 23
ತಾಲೂಕಿನ ಬಹುತೇಕ ಗ್ರಾಮಗಳ ಜನತೆ ಕುಡಿಯುವ ನೀರಿಗಾಗಿ ಕೆರೆಗಳನ್ನೇ ಅವಲಂಬಿಸಿದ್ದಾರೆ. ಹಾಗಾಗಿ ಈ ಭಾಗದ ಕೆರೆಗಳನ್ನು ತುಂಬಿಸಲು ಮಲಪ್ರಭಾ ಜಲಾಶಯದಿಂದ ಕಾಲುವೆ ಮುಖಾಂತರ 8 ದಿನಗಳ ಹಿಂದೆಯೇ ನೀರು ಬಿಟ್ಟಿದ್ದಾರೆ. ಆದರೆ, ಈ ಭಾಗದ ಗ್ರಾಮಗಳ ಕೆರೆಗೆ ನೀರು ಮುಟ್ಟುವ ಮುನ್ನವೇ ಕಾಲುವೆ ನೀರು ಸ್ಥಗಿತಗೊಳಿಸಿದ್ದರಿಂದ ಈ ಗ್ರಾಮಸ್ಥರಿಗೆ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ.
ತಾಲೂಕಿನ ಕೆಳ ಭಾಗದ ಗ್ರಾಮಗಳಾದ ರಡ್ಡೇರನಾಗನೂರ, ಗಂಗಾಪುರ, ಖಾನಾಪುರ, ಹದಲಿ, ಭೈರನಹಟ್ಟಿ, ಸುರಕೋಡ, ಕುರ್ಲಗೇರಿ, ಬನಹಟ್ಟಿ, ಹುಣಸಿಕಟ್ಟಿ ಈ ಗ್ರಾಮಗಳು ನೀರಾವರಿ ಕಾಲುವೆಗಳಿಗೆ ಹೊಂದಿಕೊಂಡಂತೆ ಕೆಳ ಭಾಗದಲ್ಲಿ ಇರುವುದರಿಂದ ಜಲಾಶಯದಿಂದ ಕುಡಿಯುವ ನೀರನ್ನು ಕಾಲುವೆಯ ಮೂಲಕ 8 ದಿನಗಳ ಹಿಂದೆಯೇ ಬಿಟ್ಟರೂ ಇಲ್ಲಿಯವರೆಗೆ ನೀರು ಬಂದಿಲ್ಲ. ಈ ಕುರಿತು ಗ್ರಾಮಸ್ಥರು ಕಾಲುವೆ ನೀರು ಬಂದಿಲ್ಲವೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆದರೆ, ಈ ಕೆಲಸ ನಮ್ಮಿಂದಾಗಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿಗಳಿಗೆ ತಿಳಿಸುತ್ತೇವೆ ಎಂಬ ಹಾರಿಕೆ ಉತ್ತರ ನೀಡುತ್ತಾರೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ಕೆರೆಗಳಿಗೆ ಮುಂಬರುವ ಬೇಸಿಗೆಯಲ್ಲಿ ಸಾಕಾಗುವಷ್ಟು ನೀರು ಬಿಡುವಂತೆ ಕೋರಲಾಗಿತ್ತು. ಆದರೆ, ಮಲಪ್ರಭಾ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದ ಹಿನ್ನೆಲೆಯಲ್ಲಿ ನಾಲ್ಕೈದು ದಿನಗಳ ಕಾಲ ಮಾತ್ರ ನೀರು ಪೂರೈಕೆ ಮಾಡಿ ಸ್ಥಗಿತಗೊಳಿಸಿದ್ದರು. ಈಗ ಮತ್ತೆ ಕೆರೆಗಳಲ್ಲಿನ ನೀರು ಖಾಲಿಯಾಗಿದ್ದರಿಂದ ಮಾರ್ಚ್ ಅಂತ್ಯದಲ್ಲಿ ಜಿಲ್ಲಾಡಳಿತ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಲು ಡ್ಯಾಂ ಅಧಿಕಾರಿಗಳಿಗೆ ಮನವಿ ಮಾಡಿತ್ತು. ಮನವಿ ಆಧಾರದಲ್ಲಿ ಕಾಲುವೆಗೆ ನೀರು ಹರಿಸಲಾಗಿತ್ತು. ಆದರೆ, ಕೆರೆಗಳಿಗೆ ನೀರು ತಲುಪುವ ಮುನ್ನವೇ ಕಾಲುವೆ ನೀರು ಸ್ಥಗಿತಗೊಂಡಿದೆ.
10 ದಿನ ನೀರು ಪೂರೈಸಿ: ಜಿಲ್ಲಾಧಿಕಾರಿಗಳು ಈ ಭಾಗದಲ್ಲಿನ ನೀರಿನ ಸಂಕಷ್ಟವನ್ನು ತಿಳಿದುಕೊಂಡು ಎಲ್ಲ ಕೆರೆಗಳಿಗೆ 2-3 ತಿಂಗಳ ವರೆಗೆ ಆಗುವಷ್ಟು ನೀರು ಸಂಗ್ರಹ ಮಾಡಿಕೊಳ್ಳಬೇಕಾದಲ್ಲಿ ಕನಿಷ್ಠ 15 ದಿನಗಳವರೆಗೆ ಕಾಲುವೆಗೆ ನೀರು ಹರಿಸಬೇಕು. ಆದರೆ, ಕೇವಲ 8 ದಿನಗಳವರೆಗೆ ನೀರನ್ನು ಬಿಟ್ಟರೆ ಅದರಲ್ಲಿ 2 ದಿನಗಳವರೆಗೆ ಕಾಲುವೆಗಳು ನೆನೆಯಲು ಸಮಯ ಬೇಕು. ಇನ್ನುಳಿದ 6 ದಿನಗಳಲ್ಲಿ ಕಾಲುವೆ ನೀರು ಕೆರೆಗೆ ಬರಲು ಸಾಧ್ಯವಿಲ್ಲ.
ಆದ್ದರಿಂದ ಜಿಲ್ಲಾಧಿಕಾರಿಗಳು ಜಲಾಶಯದಿಂದ ಇನ್ನೂ 10 ದಿನಗಳವರೆಗೆ ನೀರನ್ನು ಪೂರೈಸಿದಲ್ಲಿ ಕೆರೆಗಳಿಗೆ ನೀರು ಹರಿದು ಬರಲು ಸಾಧ್ಯ.
8 ದಿನಗಳವರೆಗೆ ಕಾಲುವೆಗೆ ನೀರು ಬಿಟ್ಟರೂ ಕೆಳಭಾಗದ ಗ್ರಾಮಗಳಾದ ರಡ್ಡೇರ ನಾಗನೂರ, ಹದಲಿ, ಕುರ್ಲಗೇರಿ, ಸುರಕೋಡ, ಮುದ್ಗಣಕಿ ಗ್ರಾಮಗಳ ಕೆರಗಳಿಗೆ ನೀರು ಮುಟ್ಟದೆ ಇರುವುದರಿಂದ ಈ ಗ್ರಾಮಸ್ಥರಿಗೆ ನೀರಿಗಾಗಿ ಏನು ಮಾಡಬೇಕೆನ್ನುವುದು ತೋಚದಂತಾಗಿದೆ.



ಜಿಲ್ಲಾಧಿಕಾರಿಗಳ ಆದೇಶ ಪ್ರಕಾರ 8 ದಿನ ಜಲಾಶಯದಿಂದ ಕಾಲುವೆಗಳ ಮೂಲಕ ಕೆರೆಗೆ ನೀರು ತುಂಬಿಕೊಳ್ಳಲು ಅನುಕೂಲ ಮಾಡಲಾಗಿತ್ತು. ಆದರೆ, ತಾಲೂಕಿನ ಕೆಲ ಕೆಳ ಗ್ರಾಮಗಳ ಕೆರೆಗಳಿಗೆ ನೀರು ತಲುಪಿಲ್ಲವೆಂದು ಗ್ರಾಮಸ್ಥರು ಮತ್ತು ಗ್ರಾಪಂ ಅಧಿಕಾರಿಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿ, ಇನ್ನೂ 5 ದಿನಗಳವರೆಗೆ ಕಾಲುವೆ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
   
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement