ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನಾಳೆ ಕಾಲಕಾಲೇಶ್ವರ ರಥೋತ್ಸವ

Rashmi Kasaragodu
Updated On : 24 Apr 2013, 11:03 am

(ವಿಶೇಷ ವರದಿ)

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಏ. 23
ಅಧರ್ಮ ಅಳಿದು, ಧರ್ಮ ಸಂಸ್ಥಾಪನೆಗೆ ಅವತಾರವೆತ್ತಿದ, ನಿಸರ್ಗ ರಮಣಿಯ ಜಾಳೀಂದ್ರಗಿರಿ ಮಡಿಲ ಅಂತರ ಗಂಗೆಯ ಜಡೆಯಲ್ಲಿ ಕಂಗೊಳಿಸುತ್ತಿರುವ ವಿಶ್ವೇಶ್ವರ, ಕಾಲಭೈರವ, ಕಳಕಮಲ್ಲ ಹೀಗೆ ಹಲವು ನಾಮಾಂಕಿತಗಳಿಂದ ಪೂಜಿಸಲ್ಪಡುವ ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಕಾಲಕಾಲೇಶ್ವರ ಮಹಾ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಏ. 25ರಂದು ನಡೆಯಲಿದೆ.
ಗಜೇಂದ್ರಗಡ ಪಟ್ಟಣದಿಂದ 4 ಕಿಮೀ ದೂರದಲ್ಲಿರುವ ಈ ಸುಕ್ಷೇತ್ರವು ಪುರಾತನ, ಪೌರಾಣಿಕ ಇತಿಹಾಸ ಹೊಂದಿದೆ. ಅನೇಕ ಪುರಾತನ ಕೃತಿಗಳಲ್ಲಿ ದಕ್ಷಿಣ ಕಾಶಿಯೆಂದೇ ಉಲ್ಲೇಖಿತವಾಗಿದೆ. ಶ್ರೀಕ್ಷೇತ್ರವು ಜಾಳಿಂದ್ರಗಿರಿಯಲ್ಲಿ ಮಂದಹಾಸ ಬೀರುತ್ತಿರುವ ದ್ರವ್ಯ ಪರಿಮಳ ಭರಿತ ಮಂದಾರ ಪುಷ್ಪದ ತಾಣವೂ ಹೌದು. ಜತೆಗೆ ಪವಾಡ ಸದೃಶವೆನಿಸಿರುವ ಕಳಕಮಲ್ಲಯ್ಯನ ಕ್ಷೇತ್ರ ಭಕ್ತರನ್ನು ಕೈ ಬೀಸಿ ಕರೆಯುತ್ತಿದೆ.
ಪವಾಡ ಭರಿತ ಕಳಕಮಲ್ಲಯ್ಯನ ದರ್ಶನ ಪಡೆಯಬೇಕಾದರೆ 200ಕ್ಕೂ ಅಧಿಕ ಮೆಟ್ಟಿಲುಗಳನ್ನು ಎದುಸಿರು ಬಿಡುತ್ತಾ ಮೇಲೆ ಹತ್ತಿದಾಗ ಆಯಾಸವಾದ ಆ ದಣಿವಿಗೆ ಅಂತರ ಗಂಗೆಯು ನೀರಿನ ಸಿಂಚನ ಮಾಡಿ ಮನಕೆ ಮುದ ನೀಡಿ ಸಂತೈಸುತ್ತಾಳೆ. ಅಲ್ಲಿಂದ ಜಾಗಟೆ ಸದ್ದಿನ ಸುರಿಮಳೆಯ ಮಧ್ಯೆ ಪ್ರವೇಶಿಸಿದಾಗ ನಿಸರ್ಗ ನಿರ್ಮಿತ ಗರ್ಭಗುಡಿಯಲ್ಲಿ ಕಂಗೊಳಿಸುವ ಆ ಸ್ವಯಂಭೂ ಲಿಂಗದ (ಶ್ರೀ ಕಾಲಕಾಲೇಶ್ವರ) ದರ್ಶನ ಸಾಧ್ಯವಾಗುತ್ತದೆ.
ಸೃಷ್ಟಿ ನಿರ್ಮಿತ ಸ್ವಯಂಭೂ ಲಿಂಗದ ದರ್ಶನ ಪಡೆದರೆ ಸಾಕ್ಷಾತ್ ಕಾಶಿಯಲ್ಲಿನ ವಿಶ್ವೇಶ್ವರನ ದರ್ಶನ ಮಾಡಿದಷ್ಟು ಫಲ ಸಿಗುತ್ತದೆ ಎಂಬುದು ಭಕ್ತರ ನಂಬಿಕೆ. ಅಲ್ಲದೆ ಕ್ಷೇತ್ರದ ಹೆಸರೆತ್ತಿದರೆ ಸಾಕು, ಆಕಾಶ ಗಂಟೆಯ ಬಗೆಗೆ ಭಕ್ತರು ನೆನಪಿಸುತ್ತಾರೆ. ಶ್ರೀಕ್ಷೇತ್ರದಲ್ಲಿ ನೂರಾರು ವರ್ಷಗಳ ಹಿಂದೆ ಎರಡು ಸೇರುಗಳಿಗೂ ಅಧಿಕ ಅವರೆ ಕಾಳು ಹಿಡಿಯುವಷ್ಟು ದೊಡ್ಡ ಪ್ರಮಾಣದ ಗಂಟೆಯೊಂದು ಕ್ಷೇತ್ರದ ಹೃದಯ ಭಾಗದಂತಿರುವ ಅಂತರ ಗಂಗೆಯ ಪಡೆಯಲ್ಲಿತ್ತು.
ಬಳಿಕ ಗಂಟೆ ಆಕಾಶ ಮಾರ್ಗವಾಗಿ ಢಣ...ಢಣ...ಎಂದು ನಾದಗೈಯುತ್ತಾ ಕೈಲಾಸ ಸೇರಿತು ಎನ್ನುವ ಪ್ರತೀತಿ ಇದೆ. ಬೆಟ್ಟದ ಮೇಲ್ಭಾಗದ ಪಡೆಯಲ್ಲಿ ಸುಣ್ಣ, ಕೆಂಪು ಬಣ್ಣದ ಸುರಮಾ ತಂತಾನೆ ಲೇಪನವಾಗುವುದು, ಜತೆಗೆ ಕ್ಷೇತ್ರದ ಬೆಟ್ಟದಲ್ಲಿ ಭವಿಷ್ಯ ಹೇಳುವ ಗುಂಡು, ದಿವ್ಯ ಔಷಧಿ ಸಸ್ಯಗಳ ತಾಣ. ಅಜ್ಜಿಯ ಶಾಪದಿಂದ ಕಲ್ಲಾದ ಮಂಗ. ತೂಗು ತೊಟ್ಟಿಲು ಮಳೆಯ ಕುರುಹು ಹೀಗೆ ಕ್ಷೇತ್ರದಲ್ಲಿ ಹತ್ತು ಹಲವು ಪವಾಡ ಸಿದ್ದಿ ಅಡಗಿದೆ.
ಅಗಸ್ತ್ಯ ಮಹಾಮುನಿಗಳ ಕೃಪೆಯಿಂದಾಗಿ 14ನೇ ಶತಮಾನದಲ್ಲಿ ಗಜೇಂದ್ರಗಡ ಪುರಕ್ಕೆ ಭಾರಧ್ವಜ ಗೋತ್ರದವರೇ ಆದ ಹಿಂದುರಾವ್ ಮನೆತನ ತಮ್ಮ ವೀರ ಸಿಂಹಾಸನವನ್ನು ಇಲ್ಲಿ ಸ್ಥಾಪಿಸಿ, ಬಳಿಕ ಮರಾಠ ಕ್ಷತ್ರಿಯ ವಂಶಸ್ಥ ಭೋಸ್ಲೆ ಘೋರ್ಪಡೆಯವರ ಮೂಲ ವಂಶಸ್ಥ ಮಾಳೋಜಿರಾವ್ರ ಆಳ್ವಿಕೆಯಿಂದ ಇಂದಿನ ಪ್ರತಾಪ್ಸಿಂಹ ಭುಜಂಗರಾವ್ ಘೋರ್ಪಡೆ ಮನೆತನದವರು ಶ್ರೀಕ್ಷೇತ್ರದ ಸೇವೆಗೈಯುತ್ತಿದ್ದಾರೆ.
ಜತೆಗೆ ನಿತ್ಯ ತ್ರಿಕಾಲ ಪೂಜೆ ಇಲ್ಲಿನ ವಿಶೇಷ. ಪ್ರತಿ ವರ್ಷ ಯುಗಾದಿ ಪಾಡ್ಯದಂದು ರಥ ಪೂಜೆಯೊಂದಿಗೆ ಆರಂಭವಾಗಿ ಧವನದ ಹುಣ್ಣಿಮೆ ದಿನ ಸಂಜೆ ನೀಲಾಕಾಶದಲ್ಲಿ ನಕ್ಷತ್ರ ಗೋಚರ ಖಚಿತಗೊಂಡ ಕೂಡಲೇ ಧರ್ಮದರ್ಶಿ ಘೋರ್ಪಡೆ ವಂಶಜರು ಬಾನೆತ್ತರಕ್ಕೆ ತುಪಾಕಿ ಹಾರಿಸುತ್ತಿದ್ದಂತೆ ಹರ ಹರ ಮಹಾದೇವ ಎಂಬ ಲಕ್ಷಾಂತರ ಭಕ್ತರ ಹರ್ಷೋದ್ಘಾರದ ಮಧ್ಯೆ ಮಹಾ ರಥೋತ್ಸವ ಜರುಗುವುದು.
ನಂತರ ಕಾಲಕಾಲೇಶ್ವರನಿಗೆ ದವನ ಸಮರ್ಪಿಸುವುದು ವಾಡಿಕೆ. ಇಂತಹ ವಿಜೃಂಭಣೆಯ ಸಂಭ್ರಮ ಕ್ಷಣ ಕಣ್ತುಂಬಿಕೊಳ್ಳಲು ರಾಜ್ಯದ ಹಲವಾರು ಜಿಲ್ಲೆಗಳಲ್ಲದೆ, ಹೊರ ರಾಜ್ಯದಿಂದಲೂ ಶ್ರೀಕ್ಷೇತಕ್ಕೆ ಬರುವ ಭಕ್ತ ಸಮೂಹವನ್ನು ನೋಡಲು ಎರಡು ಕಣ್ಣು ಸಾಲದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement