ಗದಗ: ಬಿಜೆಪಿಗೆ ಪೋಸ್ಕೊ ತೊಡಕು
ಗದಗ: ಪೋಸ್ಕೊ ಸ್ಥಾಪನೆಯ ವಿಷಯವಾಗಿ ಗದಗ ಜಿಲ್ಲೆ ರಾಷ್ಟ್ರದ ಗಮನವನ್ನೇ ಸೆಳೆದಿತ್ತು. ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡ ಒಡಂಬಡಿಕೆ ಅನುಷ್ಠಾನ ಮಾಡಲು ಹೋಗಿ ಬಿಜೆಪಿ ಸರ್ಕಾರ ಸ್ಥಳೀಯ ರೈತರಿಂದ ತೀವ್ರ ವಿರೋಧ ಎದುರಿಸಿ, ಪೋಸ್ಕೊ ಸ್ಥಾಪನೆಯಿಂದಲೇ ಹಿಂದೆ ಸರಿಯಿತು. ಆದರೆ, ಈ ಬಾರಿ ಚುನಾವಣೆಯಲ್ಲಿ ಇದು ಆಡಳಿತಾರೂಢ ಬಿಜೆಪಿಗೆ ದೊಡ್ಡ ತೊಡಕಾಗುವ ಸಾಧ್ಯತೆ ಇದೆ.
ಮುಂಡರಗಿ ತಾಲೂಕಿನ ಡಂಬಳ (31 ಹಳ್ಳಿಗಳು) ಹೋಬಳಿಯಲ್ಲಿ 39 ಸಾವಿರ ಮತದಾರರು ಇದ್ದು, ರೋಣ ಮತಕ್ಷೇತ್ರದ ವ್ಯಾಪ್ತಿಗೆ ಬರುತ್ತಾರೆ. ಪೋಸ್ಕೊ ಸ್ಥಾಪಿಸಲು ಉದ್ದೇಶಿಸಿದ್ದ ಹಳ್ಳಿಕೇರಿ, ಹಳ್ಳಿಗುಡಿ, ಮೇವುಂಡಿ, ಜಂತ್ಲಿ, ಶಿರೂರು ಗ್ರಾಮಗಳು ಈ ಹೋಬಳಿ ವ್ಯಾಪ್ತಿಯಲ್ಲಿದ್ದು, ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ರೂಪಿಸಿದ್ದ ರೈತರ ಮತಗಳು ಅಭ್ಯರ್ಥಿಗಳ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ಹೇಮಗಿರೀಶ ಹಾವಿನಾಳ (ಜೆಡಿಎಸ್), ಜಿ.ಎಸ್. ಪಾಟೀಲ್ (ಕಾಂಗ್ರೆಸ್), ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕಳಕಪ್ಪ ಬಂಡಿ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
2010 ಏಪ್ರಿಲ್ 24ರಂದು ಸರ್ಕಾರ ಪೋಸ್ಕೊ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಜಿಲ್ಲೆಯ ಹಳ್ಳಿಗುಡಿ, ಜಂತ್ಲಿ, ಶಿರೂರ ಸೇರಿದಂತೆ ಮುಂಡರಗಿ ತಾಲೂಕಿನ 3650 ಎಕರೆ ಭೂಮಿ ಸ್ವಾಧೀನಕ್ಕೆ ಕೆಐಎಡಿಬಿ ಮೂಲಕ ಆದೇಶ ಹೊರಡಿಸಿತ್ತು. ಇದರಿಂದ ಇಲ್ಲಿನ ರೈತರ ಫಲವತ್ತಾದ ಕೃಷಿ ಭೂಮಿ ಕೈಗಾರಿಕೆ ಹೆಸರಿನಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಪಾಲಾಗಿ, ರೈತರು ಬೀದಿಗೆ ಬರುತ್ತಾರೆ ಎನ್ನುವ ವಿಷಯ ಮಾಧ್ಯಮಗಳಿಂದ ಬಯಲಾಗುತ್ತಿದ್ದಂತೆ, ಎಲ್ಲ ವಿರೋಧ ಪಕ್ಷಗಳು ಎಚ್ಚೆತ್ತುಕೊಂಡು ರೈತರನ್ನು ಬೆಂಬಲಿಸಿ ಹೋರಾಟಕ್ಕೆ ಧುಮುಕಿದರು.
ಇದಕ್ಕೆ ನಾಡಿನ ಹಲವಾರು ಮಠಾಧೀಶರು ನೇತೃತ್ವ ವಹಿಸಿದರು. ಹೋರಾಟಕ್ಕೆ ಬೆದರಿದ ಸರ್ಕಾರ ಯಾವುದೇ ಕಾರಣಕ್ಕೂ ಗದಗನಲ್ಲಿ ಪೋಸ್ಕೊ ಸ್ಥಾಪಿಸುವುದಿಲ್ಲ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿತ್ತು.
ಒಡಿಶಾದಲ್ಲಿ ವಿರೋಧ, ಕರ್ನಾಟಕದಲ್ಲಿ ಪರ: ಪೋಸ್ಕೊ ಸ್ಥಾಪನೆಯ ವಿಷಯದಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರು ಅತಿ ದ್ವಂದ್ವ ನಿಲುವನ್ನು ಪ್ರದರ್ಶಿಸಿದ್ದು ರಾಜ್ಯ ನಾಯಕರಿಗೆ ತೀವ್ರ ತಲೆನೋವಾಗಿ ಪರಿಣಮಿಸಿತ್ತು. ಒಡಿಶಾದಲ್ಲಿ ಪೋಸ್ಕೊ ಸ್ಥಾಪನೆಯ ವಿರುದ್ಧ ಬಿಜೆಪಿಯ ವರಿಷ್ಠ ನಾಯಕರೇ ಹೋರಾಟ ಮಾಡಿದ್ದರು. ಆದರೆ, ಕರ್ನಾಟಕದಲ್ಲಿ ಮಾತ್ರ ಪೋಸ್ಕೊ ಸ್ಥಾಪನೆಗೆ ಸಮ್ಮತಿ ಸೂಚಿಸಿದ್ದು ಹಲವಾರು ಸಂಶಯಕ್ಕೆ ಕಾರಣವಾಯಿತು. ಇದನ್ನೇ ರಾಜಕೀಯವಾಗಿ ಲಾಭ ಮಾಡಿಕೊಳ್ಳುವ ನಿಟ್ಟಿನಲ್ಲಿ ಚಿಂತಿಸಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಚುನಾವಣೆ ಘೋಷಣೆಗೆ ಮುನ್ನ ಕುಮಾರಸ್ವಾಮಿ ಹಳ್ಳಿಗುಡಿಗೆ ಆಗಮಿಸಿ, ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳಿಂದ ರೈತರ ಹಿತ ಕಾಯಲು ಸಾಧ್ಯವಿಲ್ಲ. ಅದಕ್ಕಾಗಿ ಪ್ರಾದೇಶಿಕ ಪಕ್ಷಕ್ಕೆ ಮತ ಹಾಕಿರಿ ಎಂದು ಅಂದೇ ಅಲ್ಲಿನ ರೈತರ ಮನವೊಲಿಸಿದ್ದರು ಎನ್ನುವುದು ಈಗ ಗಮನಾರ್ಹ ವಿಷಯವಾಗಿ ಹೊರ ಹೊಮ್ಮುತ್ತಿದೆ.
ಈಗಲೂ ಪರ, ವಿರೋಧ: ಅಂದಿನ ಸಿಎಂ ಬಿಎಸ್ವೈ ಪೋಸ್ಕೊ ಸ್ಥಾಪನೆಯಿಂದ ಸರ್ಕಾರ ಹಿಂದೆ ಸರಿದಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಇಲ್ಲಿಯವರೆಗೂ ಭೂಸ್ವಾಧೀನವನ್ನು ರದ್ದುಗೊಳಿಸಿದೆ ಎನ್ನುವ ಕುರಿತು ರಾಜ್ಯ ಪತ್ರವನ್ನು ಹೊರಡಿಸಿಲ್ಲ, ಪೋಸ್ಕೊ ಸ್ಥಾಪನೆಯ ವೇಳೆಯಲ್ಲಿ ಅಲ್ಲಿನ ರೈತರಲ್ಲಿ ಸಾಕಷ್ಟು ಗೊಂದಲವಿತ್ತು. ಕೆಲವರು ಪೋಸ್ಕೊ ಯಾವುದೇ ಕಾರಣಕ್ಕೂ ಬೇಡ ಎಂದರೆ, ಮತ್ತೆ ಕೆಲ ರೈತರು ಬೇಕೇ ಬೇಕು ಎಂದು ಪ್ರತಿಭಟನೆ ಮಾಡಿ ಹೋರಾಟವನ್ನು ನಡೆಸಿದ್ದರು. ಈಗಲೂ ಗ್ರಾಮಗಳಲ್ಲಿ ಪರ ವಿರೋಧ ಕೇಳಿ ಬರುತ್ತಿದೆ.
ಆಡಳಿತಾರೂಢ ಪಕ್ಷಕ್ಕೆ ತೊಂದರೆ: ಪೋಸ್ಕೊ ಕಂಪನಿ ಸ್ಥಾಪನೆಯ ಪರ ಹಾಗೂ ವಿರೋಧವಾಗಿ ರೈತರು ನಡೆಸುತ್ತಿದ್ದ ಹೋರಾಟದ ವೇಳೆಯಲ್ಲಿ ಹಾಗೂ ಪ್ರಸ್ತುತ ರೋಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವುದು ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ. ಹೋರಾಟದ ಸಂದರ್ಭದಲ್ಲಿ ಅವರು ಪೋಸ್ಕೊ ಪರ, ವಿರೋಧವಾಗಿ ಮಾತನಾಡದೇ ಸುಮ್ಮನೇ ಇದ್ದು, ಪ್ರಗತಿಗೆ ಕೈಗಾರಿಕೆಗಳು ಬೇಕು ಎನ್ನುವ ಮೂಲಕ ಪರೋಕ್ಷವಾಗಿ ಪೋಸ್ಕೊ ಪರವಾಗಿ ಬ್ಯಾಟಿಂಗ್ ಮಾಡಿದ್ದರು. ಆದರೆ, ಈ ಎಲ್ಲ ಬೆಳವಣಿಗೆ ನೇರವಾಗಿ ಜಿಲ್ಲೆಯ ರಾಜಕೀಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ನಿಚ್ಚಳವಾಗುತ್ತಿದೆ.
ಜೆಡಿಎಸ್ಗೆ ವರವಾಗಲಿದೆಯೇ?
ಒಡಿಶಾದಲ್ಲಿ ಕಾಂಗ್ರೆಸ್ ಪೋಸ್ಕೊ ಅನುಷ್ಠಾನಕ್ಕೆ ಪ್ರಯತ್ನಿಸಿದರೆ, ಕರ್ನಾಟಕದಲ್ಲಿ ವಿರೋಧಿಸುತ್ತಿದೆ. ಒಡಿಶಾದಲ್ಲಿ ಬಿಜೆಪಿ ಪೋಸ್ಕೋ ವಿರೋಧಿಸಿದ್ದರೆ, ಕರ್ನಾಟಕದಲ್ಲಿ ಸ್ಥಾಪನೆ ಮಾಡಲು ಹವಣಿಸುತ್ತಿದೆ. ಇದರಿಂದಾಗಿ ರಾಷ್ಟ್ರೀಯ ಪಕ್ಷಗಳು ರೈತರ ಪರವಾಗಿಲ್ಲ. ನಮ್ಮನ್ನು ಬೆಂಬಲಿಸಿ ಎಂದು ಜೆಡಿಎಸ್ (ಕುಮಾರಸ್ವಾಮಿಯವರು) ಸಮರ್ಥವಾಗಿ ಮತದಾರರಲ್ಲಿ ಬಿಂಬಿಸುವಲ್ಲಿ ಯಶಸ್ವಿಯಾಗಿದೆ. ಇದು ಇಲ್ಲಿಯವರೆಗೂ ರಾಷ್ಟ್ರೀಯ ಪಕ್ಷಗಳ ಗಮನಕ್ಕೂ ಬಂದಿಲ್ಲ. ಹಾಗಾಗಿ ಪೋಸ್ಕೊ ಕರಿನೆರಳು ರೋಣ ಕ್ಷೇತ್ರದ ಮೇಲೆ ಅತ್ಯಂತ ಜೋರಾಗಿ ಆವರಿಸಿಕೊಳ್ಳುತ್ತಿದ್ದು, ಯಾವ ಅಭ್ಯರ್ಥಿ ಭವಿಷ್ಯಕ್ಕೆ ಮಂಕಾಗುತ್ತದೆಯೋ ಕಾದು ನೋಡಬೇಕು.
-ಶಿವಕುಮಾರ ಕುಷ್ಟಗಿ