ಗದಗ: ಬಿರುಸಿನ ಗಾಳಿ, ಅಲ್ಪ ಮಳೆ; ಧರೆಗುರುಳಿದ ಮರಗಳು
ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಶನಿವಾರ ಸಂಜೆ ಬಿರುಗಾಳಿಯಿಂದ ಕೂಡಿದ ಅಲ್ಪ ಮಳೆಯಾಗಿದೆ. ಮಳೆಗಿಂತ ಜೋರಾಗಿ ಬೀಸಿದ ಗಾಳಿಯಿಂದ 20ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿದ್ದು, ಹಲವಾರು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಯಿತು. ಕೆಲ ಬಡಾವಣೆಗಳಲ್ಲಿನ ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಅಲ್ಲಿ ರಾತ್ರಿಯಿಡಿ ವಿದ್ಯುತ್ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ. ಬೆಟಗೇರಿ ಸೆಟ್ಲಮೆಂಟ್ ಭಾಗದಲ್ಲಿನ ಹಲವಾರು ಮನೆಗಳ ತಗಡುಗಳು ಗಾಳಿಯ ರಭಸಕ್ಕೆ ಕಿತ್ತು ಹೋಗಿವೆ. ಕಳಸಾಪುರ ರಸ್ತೆಯ ಕೆಲ ಭಾಗಗಳಲ್ಲಿ ಅಂಗಡಿಗಳ ತಗಡುಗಳು ಹಾರಿ ಹೋದ ಬಗ್ಗೆ ವರದಿಯಾಗಿದೆ. ಅಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ಮಳೆ ತಂಪು ಎರೆದಿದೆ. ಕಳೆದೆರಡು ದಿನಗಳಿಂದ ಕಾಣಿಸಿಕೊಂಡಿರುವ ಮಳೆಯಿಂದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಪ್ರಾರಂಭಗೊಂಡಿವೆ.