ಮತ ಸೆಳೆಯಲು ವಾಮಾಚಾರ!
ಕನ್ನಡಪ್ರಭ ವಾರ್ತೆ, ರೋಣ, ಏ. 27
ನಾಲ್ವರ ತಂಡವೊಂದು ತಾಲೂಕಿನ ಜಿಗಳೂರ ಗ್ರಾಮದಲ್ಲಿ ಮತ ಸೆಳೆಯಲು ವಾಮಾಚಾರ ಮಾಡುತ್ತಿರುವ ಶಂಕೆ ವ್ಯಕ್ತಪಡಿಸಿದ ಗ್ರಾಮಸ್ಥರು ವಾಮಾಚಾರಿಯನ್ನು ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಕೂಡಿ ಹಾಕಿ, ಬಳಿಕ ಪೊಲೀಸರಿಗೆ ಒಪ್ಪಿಸಿದ ಘಟನೆ ಶನಿವಾರ ನಡೆದಿದೆ.
ಕಾರಲ್ಲಿ ಬಂದ ಪ್ರಮುಖ ಪಕ್ಷವೊಂದರ ನಾಲ್ವರು ಕಾರ್ಯಕರ್ತರು ಜಿಗಳೂರ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಕರಿ ಎಳ್ಳನ್ನು ಗ್ರಾಮದೆಲ್ಲೆಡೆ ಚೆಲ್ಲುತ್ತಾ ಹೊರಟಿದ್ದರು. ಗ್ರಾಮಸ್ಥರು ಸಂಶಯಗೊಂಡು ವಿಚಾರಿಸಿದಾಗ ಒಬ್ಬೊಬ್ಬರು ಒಂದೊಂದು ವಿಚಾರ ಹೇಳಿ ತಪ್ಪು ಮಾಹಿತಿ ನೀಡಿದರು. ನಾವು ಚುನಾವಣೆ ಪ್ರಚಾರಕ್ಕೆ ಬಂದಿದ್ದೇವೆ. ಮತಗಳ ಕುರಿತು ಸಮೀಕ್ಷೆ ನಡೆಸಿದ್ದೇವೆ ಎಂದರು. ಯಾವ ಪಕ್ಷದವರೆಂದು ಕೇಳಿದಾಗಲೂ ಸ್ಪಷ್ಟ ಉತ್ತರ ನೀಡಲಿಲ್ಲ. ಆಗ ಸಂದೇಹಗೊಂಡ ಗ್ರಾಮಸ್ಥರು ಅವರನ್ನು ಹಿಡಿಯಲು ಯತ್ನಿಸಿದರು, ಮೂವರು ಕಾರನ್ನೇರಿ ತಪ್ಪಿಸಿಕೊಂಡು ಪರಾರಿಯಾದರು. ಓರ್ವ ಸಿಕ್ಕಿಬಿದ್ದ. ಆತನನ್ನು ಗ್ರಾಮದ ಮೈಲಾರ ಲಿಂಗೇಶ್ವರ ದೇವಸ್ಥಾನದಲ್ಲಿ ಕೂಡಿ ಹಾಕಿ ಪೊಲೀಸರಿಗೆ ಮಾಹಿತಿ ನೀಡಿದರು.
ಗೊಂದಲದ ಹೇಳಿಕೆ: ಕರಿ ಎಳ್ಳನ್ನು ಚೆಲ್ಲುತ್ತಾ ಹೊರಟವರ ಪೈಕಿ ಸೆರೆ ಸಿಕ್ಕವ ತಾನು ತಾಲೂಕಿನ ಶಾಂತಗೇರಿ ಗ್ರಾಮದ ಶಾಂತೇಶ ಹರ್ತಿ ಎಂದು ಹೇಳಿದ್ದಾನೆ. ಗಜೇಂದ್ರಗಡದ ರಾಜಾರಾಂ ಕಲಾಲ ಎಂಬಾತ ಬೆಳವಟಗಿ ಗ್ರಾಮದ ಕನಕಪ್ಪ ಮತ್ತು ಬೈರಾಪುರ ಗ್ರಾಮದ ಶಿವಪ್ಪನ ಜತೆಗೆ ನನ್ನನ್ನು ಕಾರಿನಲ್ಲಿ ಕರೆದುಕೊಂಡು ಬಂದು ಜಿಗಳೂರ ಗ್ರಾಮದ ತುಂಬ ಕರಿ ಎಳ್ಳು ಚೆಲ್ಲಲು ಹೇಳಿದರು. ಈ ಬಗ್ಗೆ ರಾಜಾರಾಮ ಕಲಾಲನ ಬಳಿ ಪ್ರಶ್ನಿಸಿದ್ದೆ. ಇದು ಮತ ಗಳಿಸುವ ತಂತ್ರ ಎಂದಷ್ಟೇ ಹೇಳಿದ್ದ ಎಂದು ತಿಳಿಸಿದ್ದಾನೆ.
ಆದರೆ, ಆತ ತಾನು ಪ್ರಮುಖ ಪಕ್ಷವೊಂದರ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾನೆ. ಆದರೆ, ಇಲ್ಲಿಗೆ ಬೇರೆ ಪಕ್ಷದ ಕಾರ್ಯಕರ್ತರೊಂದಿಗೆ ಬಂದಿದ್ದಾಗಿ ಗೊಂದಲಕಾರಿ ಹೇಳಿಕೆ ನೀಡಿದ್ದಾನೆ ಎಂದು ಗ್ರಾಮಸ್ಥರಾದ ಅಶೋಕ ಹೊಸಳ್ಳಿ, ಈರಣ್ಣ ಕಲಹಾಳ, ತಿಪ್ಪಣ್ಣ ಬಸೆವಡೆಯರ, ಚಿದಾನಂದ ನಾಯ್ಕರ ತಿಳಿಸಿದರು.