ಮತದಾರರ ಮನೆಗೆ ಡಿಸಿ ಮನವಿ ಪತ್ರ
ಗದಗ: ಮೇ 5ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ನೊಂದಾಯಿತ ಮತದಾರರು ತಮ್ಮ ಅಮೂಲ್ಯವಾದ ಮತ ಚಲಾಯಿಸುವಂತೆ ಪ್ರೇರೇಪಿಸಲು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಪಂ ಸಿಇಓ ಸಹಿ ಮಾಡಿರುವ ಮನವಿ ಪತ್ರಗಳನ್ನು ಜಿಲ್ಲೆಯ ಎಲ್ಲಾ ಮತದಾರರ ಮನೆಗಳಿಗೆ ತಲುಪಿಸಲಾಗುವುದು ಎಂದು ಜಿಪಂ ಸಿಇಓ ಹಾಗೂ ಜಿಲ್ಲಾ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಭಾಗವಹಿಸುವಿಕೆ ಕಾರ್ಯಕ್ರಮ ಅನುಷ್ಠಾನ ಸಮಿತಿ ಅಧ್ಯಕ್ಷ ವೀರಣ್ಣ ತುರಮರಿ ಹೇಳಿದರು.
ಅವರು ಶುಕ್ರವಾರ ಗದಗ ತಾಪಂ ಸಭಾಂಗಣದಲ್ಲಿ ಸ್ವೀಪ್ ಸಮಿತಿಯು ಜಿಲ್ಲೆಯ ಮತದಾರರಲ್ಲಿ ಜಾಗೃತಿ ಮೂಡಿಸಲು ಏರ್ಪಡಿಸಿದ್ದ 2ನೇ ಹಂತದ ಕಾರ್ಯಕ್ರಮದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವೀಪ್ ಸಮಿತಿಯು ಮತದಾರರಲ್ಲಿ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಭಾರಿ ಸಂಖ್ಯೆಯಲ್ಲಿ ಹೊಸ ಮತದಾರರು ತಮ್ಮ ಹೆಸರನ್ನು ನೊಂದಾಯಿಸಿರುವುದು ಹರ್ಷದ ಸಂಗತಿ. ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಶೇ. 66ರಷ್ಟು ಮತದಾನ ನಡೆದಿತ್ತು. ಪ್ರಸಕ್ತ ಚುನಾವಣೆಯಲ್ಲಿ ಅದರ ಪ್ರಮಾಣವನ್ನು ಶೇ. 80ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದಕ್ಕೆ ಸಮನಾಂತರವಾಗಿ ಮತದಾರರ ಗಮನ ಸೆಳೆಯಲು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರ ಕಾರ್ಯಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 2ನೇ ಹಂತದ ಬೀದಿನಾಟಕ ಕಾರ್ಯಕ್ರಮ ಆರಂಭಿಸಲಾಗಿದೆ. ಏ. 30ರಂದು ಬೆಳಗ್ಗೆ 9ಕ್ಕೆ ಗದಗ, ಮುಳಗುಂದ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಹಾಗೂ ನಗರಸಭೆ, ಪುರಸಭೆ ಮತ್ತು ಪಪಂ ಪ್ರದೇಶಗಳಲ್ಲಿ ಮ್ಯಾರಾಥಾನ್ ಓಟವನ್ನು ಆಯೋಜಿಸಲಾಗಿದೆ. ಅಂದೇ ನಗರದ ಪ್ರಮುಖ ವರ್ತುಲಗಳಲ್ಲಿ ವಿದ್ಯಾರ್ಥಿಗಳಿಂದ ಮಾನವ ಸರಪಳಿ ರಚಿಸಲಾಗುವುದು. ಮೇ 1ರಂದು ಎಲ್ಲ ಗ್ರಾಪಂಗಳಲ್ಲಿ ಪಿಡಿಓ ನೇತೃತ್ವದಲ್ಲಿ ಮತದಾರರ ಜಾಗೃತಿ ರ್ಯಾಲಿಯನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮ ಮೇ 2 ಮತ್ತು 3ರಂದು ಉಳಿದ ಎಲ್ಲ ಗ್ರಾಮಗಳಲ್ಲಿಯೂ ನಡೆಯಲಿದೆ. ಮೇ 3 ಮತ್ತು 4ರಂದು ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಡಂಗುರ ಸಾರಿಸಲಾಗುವುದು ಎಂದರು.
ಚುನಾವಣೆಯ ಪ್ರಚಾರಕಾರ್ಯ ಜಿಲ್ಲೆಯಲ್ಲಿ ಇನ್ನಷ್ಟು ಚುರುಕುಗೊಳ್ಳಲು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವಯಸ್ಕರ ಶಿಕ್ಷಣ ಕೇಂದ್ರದ ಪ್ರೇರಕರು ಹಾಗೂ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ತಂಡಗಳನ್ನು ರಚಿಸುವಂತೆ ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಚ್.ಎಸ್.ಪರಮೇಶ್ವರಪ್ಪ, ಸ್ವೀಪ್ ಕಾರ್ಯಕ್ರಮ ವೀಕ್ಷಕ ಡಾ. ಬಿ.ಕೆ.ಎಸ್. ವರ್ಧನ್ ಮತ್ತು ನಗರಸಭಾ ಪೌರಾಯುಕ್ತ ಎಂ.ಬಿ. ನಡುವಿನಮನಿ ಮುಂತಾದವರು ಸಭೆಯಲ್ಲಿದ್ದರು.