ಮಹಾವೀರರಿಂದ ಜಗತ್ತಿಗೆ ಶಾಂತಿ ಸಂದೇಶ: ಬಾಹುಬಲಿ ಜೈನರ
ಕನ್ನಡಪ್ರಭ ವಾರ್ತೆ, ಗದಗ, ಏ. 27
ಅಹಿಂಸೆಯಿಂದ ಜಗತ್ತಿಗೆ ಶಾಂತಿ, ನೆಮ್ಮದಿ ದೊರೆಯಬೇಕು ಎಂದು 2 ಸಾವಿರ ವರ್ಷಗಳ ಹಿಂದೆ ಭಗವಾನ ಮಹಾವೀರ ವಿಶ್ವಕ್ಕೆ ತಮ್ಮ ಅಮೋಘ ಸಂದೇಶದ ಮೂಲಕ ಜಗತ್ತಿನಲ್ಲಿ ಜೀವನ ಪ್ರೀತಿಯ ಬಗ್ಗೆ ತಿಳಿವಳಿಕೆ ನೀಡಿದ ಮಹಾನ ಧರ್ಮ ಚಿಂತಕ ಎಂದು ಗದುಗಿನ ಎಎಸ್ಎಸ್ ಕಾಲೇಜಿನ ಕನ್ನಡ ಅಧ್ಯಾಪಕ ಪ್ರೊ. ಬಾಹುಬಲಿ ಜೈನರ ಹೇಳಿದರು.
ಈಚೆಗೆ ಅವರು ತಾಪಂ ಆವರಣದಲ್ಲಿರುವ ಗದಗ ಜಿಲ್ಲಾ ಕಸಾಪ ಕಚೇರಿಯಲ್ಲಿ ಜರುಗಿದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಮಹಾವೀರ ಜೀವನ ಸಂದೇಶ ಕುರಿತು ಉಪನ್ಯಾಸ ನೀಡಿದರು. ಸಕಲ ಜೀವರಾಶಿಗಳ ಕಲ್ಯಾಣದ ಹಿತದೃಷ್ಟಿಯಿಂದ ಅಹಿಂಸೆ, ಅಪರಿಗ್ರಹ ಮತ್ತು ಬ್ರಹ್ಮಚರ್ಯದ ವಿಚಾರಗಳನ್ನು ಮಹಾವೀರ ಬೋಧಿಸಿದರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿ, ಮನುಷ್ಯನ ಅತಿ ದುರಾಸೆ ಮತ್ತು ಸಂಪತ್ತಿನ ಅಪರಿಮಿತ ಸಂಗ್ರಹ ಪ್ರವೃತ್ತಿಯೇ ಇಂದು ಸಮಾಜದ ಅಸಮಾನತೆಗೆ ಕಾರಣವಾಗಿದೆ. ಸಂಪತ್ತು ಒಂದೇ ಕಡೆ ಸಂಗ್ರಹವಾಗಬಾರದು. ಇಂದು ಹೆಚ್ಚಿನ ಹಣ ಮತ್ತು ಸಂಪತ್ತನ್ನು ಸಂಗ್ರಹಿಸಿಟ್ಟುಕೊಳ್ಳುವುದರಿಂದ ಸಮಾಜ, ದೇಶ ಅನೇಕ ಸಮಸ್ಯೆ ಎದುರಿಸುವಂತಾಗಿದೆ. ಹಸಿದವರ ಹೊಟ್ಟೆ ತುಂಬಬೇಕು. ನೊಂದವರಿಗೆ ಸಾಂತ್ವನ ಸಿಗಬೇಕು. ವಸತಿ ಹೀನರಿಗೆ ಆಶ್ರಯ ದೊರಕಿ ಸರ್ವರೂ ಆನಂದದಿಂದ ಬದುಕಬೇಕು ಎಂದರು.
ಕಸಾಪ ಸಲಹಾ ಮಂಡಳಿಯ ಸದಸ್ಯ ಪ್ರಾ. ಕೆ.ಎಚ್. ಬೇಲೂರ, ಮುಂಡರಗಿಯ ಪ್ರೊ. ಆರ್.ಎಲ್. ಪೊಲೀಸ್ಪಾಟೀಲ, ಜಿಲ್ಲಾ ಕೋಶಾಧ್ಯಕ್ಷ ಮಲ್ಲೇಶ ಡಿ.ಎಚ್, ಮಲ್ಲಿಕಾರ್ಜುನ ಪೂಜಾರ, ಪ್ರಮೀಳಾ ಸಾಂಗ್ಲಿಕರ, ಸಾಹಿತಿ ಬಿ.ಎಸ್. ಹಿಂಡಿ, ಶರಣು ಗೋಗೇರಿ, ಮಂಜುನಾಥ ಹರ್ಲಾಪುರ, ಡಿ.ಎಸ್. ತಳವಾರ, ಪ್ರಾ. ಬಿ.ಜಿ. ಹಿರೇಮಠ, ಶಶಿಕಾಂತ ಕೊರ್ಲಹಳ್ಳಿ, ಪ್ರಾ. ಆರ್.ಜಿ. ಚಿಕ್ಕಮಠ, ಪ್ರೊ. ಅಶೋಕ ಸಾವಂತ, ಪ್ರೊ. ರಮೇಶ ಸಜ್ಜಗಾರ, ಶಿಕ್ಷಕ ಪ್ರಕಾಶ ಗಿಡ್ಡಣ್ಣವರ, ಮಹಾಂತೇಶ ಮದ್ನೂರ, ಎ.ಎನ್. ಬಸ್ತಿ, ಮಹಾವೀರ ಬಸ್ತಿ, ವಿಶ್ವನಾಥ ಕಮ್ಮಾರ, ಆರ್.ಎಂ. ಹಿರೇಮಠ, ಎಸ್.ಎಫ್. ಹಡಪದ, ಮಲ್ಲಿಕಾರ್ಜುನ ಗೌಡಪ್ಪಗೌಡ, ಕೆ.ಕೆ. ಹೂಗಾರ. ಯಲ್ಲಪ್ಪ ಗುಳೇದಗುಡ್ಡ ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಡಾ. ಸಂಗಮೇಶ ತಮ್ಮನಗೌಡ್ರ ಸ್ವಾಗತಿಸಿದರು. ಗದಗ ತಾಲೂಕಾ ಕಸಾಪ ಅಧ್ಯಕ್ಷ ಪ್ರೊ. ಕಿಶೋರಬಾಬು ನಾಗರಕಟ್ಟಿ ನಿರೂಪಿಸಿದರು. ಪ್ರೊ. ಜಿ.ಎಸ್. ಯತ್ನಟ್ಟಿ ವಂದಿಸಿದರು.