ಮುಂಡರಗಿ ಶಾಪ ವಿಮೋಚನೆ
ಕನ್ನಡಪ್ರಭ ವಾರ್ತೆ, ಮುಂಡರಗಿ, ಏ. 27
ಮುಂಡರಗಿಗೆ ಮುಖ್ಯಮಂತ್ರಿ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವ ಮೂಢ ನಂಬಿಕೆ ಇದೆ. ಹೀಗಾಗಿ, ಇಲ್ಲಿಗೆ ಯಾರ ಮುಖ್ಯಮಂತ್ರಿಯೂ ಬರುವ ಧೈರ್ಯ ಮಾಡಿರಲಿಲ್ಲ. ಆದರೆ, ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಶನಿವಾರ ಪಟ್ಟಣಕ್ಕೆ ಭೇಟಿ ನೀಡುವ ಮೂಲಕ ಶಾಪ ವಿಮೋಚನೆ ಮಾಡಿದ್ದಾರೆ.
ಈ ಹಿಂದೆ ಎನ್. ಧರ್ಮಸಿಂಗ್, ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದ ವೇಳೆ ಅನೇಕ ಬಾರಿ ಕಾರ್ಯಕ್ರಮಗಳನ್ನು ನಿಗದಿಗೊಳಿಸಿ ಕೊನೆಯ ಕ್ಷಣದಲ್ಲಿ ಭೇಟಿ ರದ್ದುಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆಯೇ 'ಮುಂಡರಗಿಗೆ ಬರುವರೇ ಸಿಎಂ ಶೆಟ್ಟರ್?' ಎಂಬ ವಿಶೇಷ ವರದಿಯನ್ನು ಕನ್ನಡಪ್ರಭ ಪ್ರಕಟಿಸಿತ್ತು. ಅಧಿಕಾರದ ಅವಧಿ ಪೂರ್ಣಗೊಳ್ಳುವ ಮೊದಲು ಮುಂಡರಗಿಗೆ ಭೇಟಿ ನೀಡುವುದಾಗಿ ಶೆಟ್ಟರ್ ಕಾರ್ಯಕರ್ತರಿಗೆ ಭರವಸೆ ನೀಡಿದ್ದರು. ಶನಿವಾರ ಶೆಟ್ಟರ್ ಭೇಟಿ ಹಿನ್ನೆಲೆಯಲ್ಲಿ ಪಟ್ಟಣದ ಜನತೆ ಸಂತಸಗೊಂಡಿದ್ದಾರೆ.
ಈ ಹಿಂದೆ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಮುಂಡರಗಿಗೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆಯಿಂದ ಇದುವರೆಗೂ ಒಬ್ಬ ಮುಖ್ಯಮಂತ್ರಿಯೂ ಇಲ್ಲಿಗೆ ಬಂದಿರಲಿಲ್ಲ. ನಾನು ಬಂದು ನಿಮ್ಮ ಮುಂಡರಗಿ ಶಾಪವನ್ನು ವಿಮೋಚನೆ ಮಾಡಿದ್ದೇನೆ. ನಾನೇ ಮುಂದಿನ ಸಿಎಂ ಆಗುತ್ತೇನೆ ಎಂದರು ಶೆಟ್ಟರ್.
ಶನಿವಾರ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಪಟ್ಟಣದಲ್ಲಿ ಚುನಾವಣೆ ಪ್ರಚಾರ ಮುಗಿಸಿ ಹುಬ್ಬಳ್ಳಿಗೆ ಮರಳುವಾಗ ಮುಂಡರಗಿಯಲ್ಲಿ ಸುದ್ದಿಗಾರರೊಂದಿಗೆ ಶೆಟ್ಟರ್ ಮಾತನಾಡಿದರು. ಮೇ 5ರಂದು ಜರುಗುವ ವಿಧಾನಸಭಾ ಚುನಾವಣೆಯಲ್ಲಿ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮಣ್ಣ ಲಮಾಣಿ ಅವರಿಗೆ ಮತ ನೀಡುವ ಮೂಲಕ ಪ್ರಚಂಡ ಬಹುಮತದಿಂದ ಆರಿಸಿ ತರುವಂತೆ ಮನವಿ ಮಾಡಿದರು.
ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಹೂಮಾಲೆ ಹಾಕುವ ಮೂಲಕ ಸಿಎಂ ಅವರನ್ನು ಬರಮಾಡಿಕೊಂಡರು. ಶಹರ ಬಿಜೆಪಿ ಅಧ್ಯಕ್ಷ ರಜನೀಕಾಂತ ದೇಸಾಯಿ, ಮಂಜುನಾಥ ಕಾಗನೂರ, ಮಂಜುನಾಥ ಇಟಗಿ, ಶಿವು ನವಲಗುಂದ, ಮಹೇಶ ನಾಗರಳ್ಳಿ, ಶ್ರೀನಿವಾಸ ಕಟ್ಟೀಮನಿ, ಸೀತಾರಾಮರಾಜು, ಆರ್.ಎಂ. ತಪ್ಪಡಿ, ಸುರೇಶ ಜೈನ್, ಪ್ರಕಾಶ ಪಾಟೀಲ, ಶ್ರೀನಿವಾಸ ಅಬ್ಬೀಗೇರಿ, ಪರಶುರಾಮ ಕರಡಿಕೊಳ್ಳ, ನೂರಜಾನ್ ತಳಗಡೆ, ಗುಡದಪ್ಪ ದೇಸಾಯಿ, ರಂಗಪ್ಪ ಕ್ಯಾದಿಗಿಹಳ್ಳಿ, ನೂರಾರು ಕಾರ್ಯಕರ್ತರು ಬಸ್ ನಿಲ್ದಾಣದಲ್ಲಿ ಜಮಾವಣೆಯಾಗಿ ಸಿಎಂ ಶೆಟ್ಟರ್ ಅವರನ್ನು ಬರಮಾಡಿಕೊಂಡರು.
-ಶರಣು ಸೊಲಗಿ