ಗದಗನಲ್ಲಿ ಕಾಂಗ್ರೆಸ್ ಗೂಂಡಾಗಿರಿ ನಿಲ್ಲಿಸಲಿ
ಕನ್ನಡಪ್ರಭ ವಾರ್ತೆ, ಗದಗ, ಏ. 28
ಕಾಂಗ್ರೆಸ್ ನಾಯಕರು ಹಾಗೂ ಹಿಂಬಾಲಕರು ಗದಗ ಕ್ಷೇತ್ರದಲ್ಲಿ ನ್ಯಾಯ ಸಮ್ಮತ ಚುನಾವಣೆ ನಡೆಸುವತ್ತ ಗಮನ ನೀಡಬೇಕು. ಅನ್ಯ ಪಕ್ಷಗಳಿಗೆ ತೊಂದರೆ ನೀಡಿ ಚುನಾವಣೆ ಮಾಡುವುದು ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಹೇಳಿದರು.
ಅವರು ಭಾನುವಾರ ಬೆಟಗೇರಿಯ ರಂಗಪ್ಪಜ್ಜನ ಮಠದ ಹತ್ತಿರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿಎಸ್‌ಆರ್ ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ನಗರದ 2ನೇ ವಾರ್ಡ್‌ನ ಗಾಂಧಿ ನಗರದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಪ್ರಚಾರ ಕೈಗೊಂಡ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ತಾವು ಸೋಲುವ ಭೀತಿಯಿಂದ ನಮ್ಮ ಪಕ್ಷದ ಕಾರ್ಯಕರ್ತರ ಪ್ರಚಾರ ಕಾರ್ಯಕ್ಕೆ ಅಡ್ಡಿಪಡಿಸಿದ್ದು, ಇಂತಹ ಗೂಂಡಾಗಿರಿ ವರ್ತನೆಯನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದರು. ಕಾಂಗ್ರೆಸ್ ಮುಖಂಡರು ಇಂತಹ ಗೂಂಡಾಗಿರಿ ಪ್ರವೃತ್ತಿಯನ್ನು ನಿಲ್ಲಸಬೇಕು. ಇಂತಹ ಗೂಂಡಾಗಿರಿಗೆ ಬಿಎಸ್‌ಆರ್ ಕಾಂಗ್ರೆಸ್ ಕಾರ್ಯಕರ್ತರು ಹೆದರುವುದಿಲ್ಲ.
ಮಾಜಿ ಸಚಿವ ಎಚ್.ಕೆ. ಪಾಟೀಲ ಹಾಗೂ ಮಾಜಿ ಶಾಸಕ ಡಿ.ಆರ್. ಪಾಟೀಲ ಅನುಭವಿ ರಾಜಕಾರಣಿಗಳಾಗಿದ್ದು, ಅನ್ಯ ಪಕ್ಷದ ಕಾರ್ಯಕರ್ತರು ಪ್ರಚಾರ ನಡೆಸುತ್ತಿರುವ ಸಂದರ್ಭದಲ್ಲಿ ತಮ್ಮ ಬೆಂಬಲಿಗರ ಮೂಲಕ ಬೆದರಿಕೆ ಹಾಕುತ್ತಿರುವುದು ಅವರ ಘನತೆಗೆ ಒಪ್ಪುವ ಮಾತಲ್ಲ.
ಎಲ್ಲರೂ ಪ್ರೀತಿಯಿಂದ ಮತದಾರರ ಮನಗೆಲ್ಲಲು ಪ್ರಯತ್ನಿಸಬೇಕು. ಈ ಬಾರಿಯ ಚುನಾವಣೆಯು ಜಿಲ್ಲೆಯ ಜನತೆಯ ಸ್ವಾಭಿಮಾನದ ಪ್ರಶ್ನೆಯಾಗಿದೆ.
ಮತದಾರ ಪ್ರಜ್ಞಾವಂತಿಕೆ ಮೆರೆಯಲಿದ್ದಾನೆ. ಕಾಂಗ್ರೆಸ್ಸಿಗರು ಕೆಲ ಸಮಾಜಗಳ ಹೆಸರಿನಲ್ಲಿ ಪಕ್ಷಕ್ಕೆ ಸೇರ್ಪಡೆ ಹಾಗೂ ಬೆಂಬಲ ನೀಡಿರುವ ಕುರಿತು ಪತ್ರಿಕೆಗಳಿಗೆ ವರದಿ ನೀಡುತ್ತಿರುವುದು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಈ ಕುರಿತು ಚುನಾವಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇನೆ ಎಂದರು.
ನಗರಸಭಾ ಸದಸ್ಯ ಎಂ.ಎಚ್. ಮುಳಗುಂದ, ರಾಘವೇಂದ್ರ ಯಳವತ್ತಿ, ನಾಗಲಿಂಗ ಐಲಿ ಶ್ರೀನಿವಾಸ ಕರಿ, ಸತೀಶ ಮುದಗಲ್ಲ, ಮಂಜುನಾಥ ಮ್ಯಾಗೇರಿ, ಬಾಬಾಜಾನ ಬಳಗಾನೂರ, ವೆಂಕಟೇಶ ದಾಸರ ಮುಂತಾದವರು ಪಾಲ್ಗೊಂಡಿದ್ದರು.