ಪ್ರಪಂಚದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವೆಂದು ಕರೆಸಿಕೊಳ್ಳುವ ಭಾರತದಲ್ಲಿ ಪ್ರತಿ 5 ವರ್ಷಗಳಿಗೊಮ್ಮೆ ಚುನಾವಣೆ ಜರಗುತ್ತದೆ. ಅದರಲ್ಲಿ ಮತದಾನ ಮಾಡವುದು ಪ್ರತಿಯೊಬ್ಬನ ಹಕ್ಕು. ಪ್ರಜಾಪ್ರಭುತ್ವದಲ್ಲಿ ಎಲ್ಲ ದಾನಕ್ಕಿಂತ ಮತದಾನ ಅತಿ ಶ್ರೇಷ್ಠವಾಗಿದೆ. ಅದನ್ನು ಜನತೆ ಹಣಕ್ಕೆ ಮಾರಿಕೊಂಡರೆ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತಂದುಕೊಂಡಂತೆ. ಈ ಚುನಾವಣೆಯ ಸಮಯದಲ್ಲಿ ಯಾವ ಆಮಿಷಕ್ಕೆ ಬಲಿಯಾಗದೆ ಪ್ರಜಾಪ್ರಭುತ್ವಕ್ಕೆ ಇನ್ನಷ್ಟು ಶಕ್ತಿ ತುಂಬುವ ಕಾರ್ಯ ಮಾಡಿ. ಮತದಾರ ಜಾಗೃತನಾಗಿ ಭ್ರಷ್ಟಾಚಾರ ವಿರುದ್ಧ ಒಂದು ಜನಾಂದೋಲನ ಹುಟ್ಟುಹಾಕಬೇಕಾಗಿದೆ. ಕುರುಡು ಕಾಂಚಾಣಕ್ಕೆ ಅವಕಾಶ ಸಿಗದೆ ನ್ಯಾಯಸಮ್ಮತ, ಮುಕ್ತ ಮತದಾನ ನಡೆದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ಹೆಚ್ಚಿನ ಮೌಲ್ಯ ಸಿಗುವುದು. ಪ್ರತಿಯೊಬ್ಬ ಮತದಾರ ಮೇ 5ರಂದು ಮತದಾನ ಮಾಡುವ ಮುನ್ನ ನಮ್ಮ ಜಲ, ನೆಲ, ಭಾಷೆ, ಧರ್ಮಗಳ ಬಗ್ಗೆ ಕಾಳಜಿ ಹೊಂದಿರುವ ಪಕ್ಷದ ಅಭ್ಯರ್ಥಿ ಬಗ್ಗೆ ತಿಳಿದುಕೊಂಡು ಮತದಾನ ಮಾಡಬೇಕು.
- ಶಾಂತಲಿಂಗ ಶ್ರೀಗಳು
(ನರಗುಂದ ತಾಲೂಕು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ)
ಯೋಗ್ಯರಿಗೆ ಮತ ನೀಡಿ
ತಮ್ಮ ಅಮೂಲ್ಯವಾದ ಮತವನ್ನು ಹಾಕುವ ಮುನ್ನ ಸೂಕ್ತ ವಿಚಾರ ಕೈಗೊಳ್ಳುವುದು ಅತ್ಯವಶ್ಯ. ಇಂದು ಎಲ್ಲೆಡೆ ಭ್ರಷ್ಟಾಚಾರ ತಾಂಡವಾಡುತ್ತಿದೆ. ಇದಕ್ಕೆಲ್ಲ ಪ್ರಮುಖ ಕಾರಣ ಇಂದಿನ ರಾಜಕೀಯ. ಈ ಹಿಂದಿನ ಚುನಾವಣೆಗೂ ಈಗಿನ ಚುನಾವಣೆಗೂ ಅಜಗಜಾಂತರ. ಈ ಹಿಂದೆ ಊರಿಗೊಬ್ಬ ಮುಖಂಡನಿರುತ್ತಿದ್ದ. ಅವನು ಯಾವುದೇ ಜಾತಿಗೆ, ಪಕ್ಷಕ್ಕೆ ಸೀಮಿತನಿರದೆ ಉತ್ತಮ ಆಡಳಿತ ನಡೆಸುವ ವ್ಯಕ್ತಿಗೆ ಮತ ನೀಡುವಂತೆ ಕೇಳುತ್ತಿದ್ದ. ಗ್ರಾಮಸ್ಥರು ಆತ ಹೇಳಿದಂತೆ ಕೇಳುತ್ತಿದ್ದರು. ಆದರೆ ಇಂದು ಮನೆಗೊಬ್ಬ ಮುಖಂಡ ಹುಟ್ಟಿಕೊಳ್ಳುತ್ತಿದ್ದಾನೆ. ಇದರಿಂದಾಗಿ ಮನೆ-ಮನೆಯಲ್ಲಿ ಕಲಹ ಉಂಟಾಗುತ್ತಿದೆ. ಒಂದೇ ಮನೆಯಲ್ಲಿ ಬೇರೆ ಬೇರೆ ಪಕ್ಷದ ಇಬ್ಬರು, ಮೂವರ ರಾಜಕಾರಣಿಗಳು ಹುಟ್ಟುತ್ತಿದ್ದಾರೆ. ಈ ಹಿಂದೆ ಹಣ, ಹೆಂಡಕ್ಕೆ ಜನ ಮಾರು ಹೋಗುತ್ತಿರಲಿಲ್ಲ. ಆದರೆ ಇಂದು ಆ ಪದ್ಧತಿಯಿಲ್ಲ. ಮತದಾರರು ಹಣ, ಹೆಂಡ, ಆಸೆ, ಆಮಿಷಗಳಿಗೆ ಬಲಿಯಾಗದೆ ಯೋಗ್ಯ ಅಭ್ಯರ್ಥಿಗೆ ಮತ ಚಲಾಯಿಸಬೇಕು. ಮತ ಎನ್ನುವುದು ಪವಿತ್ರವಾದ ದಾನ. ಯೋಗ್ಯ ಅಭ್ಯರ್ಥಿಗೆ ಮತ ನೀಡಿದಾಗ ಮಾತ್ರ ಅದಕ್ಕೆ ಬೆಲೆ ಬರುವುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜ್ಞಾವಂತ ಮತದಾರರು ಸೂಕ್ತ ಅಭ್ಯರ್ಥಿಯನ್ನು ಗುರುತಿಸಿ ಆಯ್ಕೆ ಮಾಡಬೇಕು. ಅಂದಾಗ ರಾಜ್ಯ ಅಭಿವೃದ್ಧಿಯಾಗಲು ಸಾಧ್ಯ. ರಾಜ್ಯದ ಅಭಿವೃದ್ಧಿಗಾಗಿ ಯೋಗ್ಯ ಅಭ್ಯರ್ಥಿಗೆ ನಿಮ್ಮ ಮತ ಅತ್ಯವಶ್ಯವಾಗಿದ್ದು, ನಿಮ್ಮ ಒಂದು ಮತ ಈ ದೇಶದ ಅಭಿವೃದ್ಧಿ ಅಥವಾ ಅಧೋಗತಿಗೆ ಕಾರಣವಾಗಲಿದೆ. ಸೂಕ್ತ ಅಭ್ಯರ್ಥಿಯನ್ನು ಗುರುತಿಸಿ ಅಂಥವರಿಗೆ ನಮ್ಮ ಮತ ನೀಡಿ.
- ಶಿವಶಾಂತವೀರ ಶ್ರೀಗಳು
(ಬಳಗಾನೂರು ಚಿಕೇನುಕೊಪ್ಪ ಚನ್ನವೀರ ಶರಣರ ಮಠ)