ಪ್ರಜಾತಂತ್ರಕ್ಕೆ ಮಸಿ ಬಳಿದ ಬಿಜೆಪಿ: ಶ್ರೀನಿವಾಸ ಮಾನೆ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಏ. 28
ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಭ್ರಷ್ಟಾಚಾರ, ಸ್ವಜನಪಕ್ಷಪಾತದ ಮೂಲಕ ಪ್ರಜಾತಂತ್ರ ವ್ಯವಸ್ಥೆಗೆ ಮಸಿ ಬಳಿದಿದ್ದು, ಮತದಾರರು ಆ ಪಕ್ಷವನ್ನು ತಿರಸ್ಕರಿಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಹೇಳಿದರು.
ಭಾನುವಾರ ರಾಜವಾಡೆ ಬಯಲು ಆವರಣದಲ್ಲಿ ನೆಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ರೋಣ ವಿಧಾನ ಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲ ಪರ ಮತ ಯಾಚಿಸಿದ ಅವರು, ರಾಜ್ಯದ ಸಮಗ್ರ ಅಭಿವೃದ್ಧಿಗೆ ಬಿಜೆಪಿಯೆ ಪರಿಹಾರವೆಂಬ ಘೋಷಣೆಯೊಂದಿಗೆ ಅಧಿಕಾರಜ ಚುಕ್ಕಾಣೆ ಹಿಡಿದ ಬಿಜೆಪಿ 4 ವರ್ಷ ಎಂಟು ತಿಂಗಳಲ್ಲಿ ಭ್ರಷ್ಟಾಚಾರದ ಅಟ್ಟಹಾಸ ಮೆರೆಯಿತು. ಭ್ರಷ್ಟಾಚಾರದಲ್ಲಿ ದೇಶದಲ್ಲೇ ರಾಜ್ಯವನ್ನು ನಂ. 1 ಮಾಡಿದ ಕೀರ್ತಿ ಬಿಜೆಪಿಗಿದೆ. ಕಡತಗಳಲ್ಲಿ ಅಭಿವೃದ್ಧಿ ಸಾಧಿಸಿದ ಕಮಲ ಪಕ್ಷ ವಾಸ್ತವದಲ್ಲಿ ಅಭಿವೃದ್ಧಿಯಿಂದ ದೂರ ಸರಿದಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿ ಜನತೆ ಗುಳೆ ಹೋದರೂ ತಮಗೆ ಸಂಬಂಧವಿಲ್ಲ ಎಂಬಂತೆ ಬಿಜೆಪಿಯ ಸಚಿವರು, ಶಾಸಕರು ಮೋಜು ಮಸ್ತಿಗಾಗಿ ರೆಸಾರ್ಟ್ ರಾಜಕೀಯ ನಡೆಸಿದ್ದು ಜನತೆಯ ಕಣ್ಮುಂದಿದೆ. ಮೇ 5ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಭ್ರಷ್ಟ ಬಿಜೆಪಿ ತೊಲಗಿಸಿ, ಕಾಂಗ್ರೆಸ್ ಗೆಲ್ಲಿಸಿ ಎಂದರು.
ಮಾಜಿ ಸಂಸದ ಆರ್.ಎಸ್. ಪಾಟೀಲ ಮಾತನಾಡಿ, ರಾಜಕೀಯದಲ್ಲಿ ಧಮಕಿ ಸಂಸ್ಕೃತಿಗೆ ಉಳಿಗಾಲವಿಲ್ಲ. ಜನತೆಯ ಜತೆ ಬೆರೆತು ಸಮಸ್ಯೆಗಳಿಗೆ ಸ್ಪಂದಿಸಿದಾಗ ಮಾತ್ರ ಉತ್ತಮ ಜನಪ್ರತಿನಿಧಿಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಕುಟುಂಬ ಸಾರ್ವಜನಿಕ ಬದುಕಿಗೆ ಸಮರ್ಪಿಸಿಕೊಂಡಿದೆ. ಜನಾಶೀರ್ವಾದ ತಮ್ಮ ಕುಟುಂಬದ ಮೇಲೆ ಸದಾ ಇದೆ ಎಂದರು.
ಅಶೋಕ ಬಾಗಮಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಸೊನ್ನದ, ಶಿವರಾಜ ಘೋರ್ಪಡೆ ಮಾತನಾಡಿದರು. ಸುಭಾನಸಾಬ ಆರಗಿದ್ದಿ, ಚಂಬಣ್ಣ ಚವಡಿ, ಮೋಹನಸಾ ರಾಯಬಾಗಿ, ದತ್ತು ಬಾಕಳೆ, ಕೀರ್ತಿಮಾಲಿನಿ ಘೋರ್ಪಡೆ, ಶರಣಪ್ಪ ಭಗವತಿ, ಗಿರೀಶ ರಂಗ್ರೇಜಿ, ಮುರ್ತುಜಾ ಡಾಲಾಯತ್, ಅಜಿತ ವಂದಕುದರಿ, ಮಾರುತಿ ಕಲ್ಲೊಡ್ಡರ್, ಎಫ್.ಎಸ್. ಕರಿದುರಗನವರ, ಉಮೇಶ ರಾಠೋಡ, ವಿ.ಬಿ. ಸೋಮಕಟ್ಟಿಮಠ, ಶ್ರೀಧರ ಗಂಜಿಗೌಡ್ರ, ಹಸನ ತಟಗಾರ ಉಪಸ್ಥಿತರಿದ್ದರು.