ಬಿಜೆಪಿಗೆ ವರವಾಗುವುದೇ ಶಾಶ್ವತ ಸೂರು
ಕನ್ನಡಪ್ರಭ ವಾರ್ತೆ, ಗದಗ, ಏ. 28
ಗದಗ ಜಿಲ್ಲೆಯು ಶಾಶ್ವತ ಬರ ಪೀಡಿತ ಜಿಲ್ಲೆ ಎನ್ನುವ ಹಣೆಪಟ್ಟಿ ಹೊಂದಿದೆ. ಜಿಲ್ಲೆಯ ಒಂದು ಭಾಗದಲ್ಲಿ ತುಂಗಭದ್ರಾ ಮತ್ತೊಂದು ಭಾಗದಲ್ಲಿ ಮಲಪ್ರಭಾ ನದಿ ಹರಿಯುತಿದೆ. 2007 ಹಾಗೂ 2009 ರಲ್ಲಿ ಉಂಟಾದ ತೀವ್ರ ಪ್ರವಾಹದ ಹಿನ್ನೆಲೆಯಲ್ಲಿ ಜಿಲ್ಲೆಯ ನರಗುಂದ ಕ್ಷೇತ್ರದ 14 ಗ್ರಾಮಗಳು ಸಂಪೂರ್ಣ ಜಲಾವೃತವಾಗಿ, ಅಲ್ಲಿನ ಜನರ ಬದುಕು ಅಕ್ಷರಶಃ ಬೀದಿಗೆ ಬಂದಿತ್ತು. ಈ ವೇಳೆ ಸರ್ಕಾರ ಅವರಿಗೆ ಆಸರೆ ಯೋಜನೆಯಡಿ ಶಾಶ್ವತ ಸೂರು ಕಲ್ಪಿಸಿದ್ದು, ಈ ಚುನಾವಣೆಯಲ್ಲಿ ಅಲ್ಲಿನ ಜನರ ಮತಗಳು ಬಿಜೆಪಿಗೆ ದೊರೆಯಲಿವೆಯೇ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.
ಪ್ರವಾಹದಿಂದ ತೊಂದರೆಗೆ ಒಳಗಾದವರ ನೆರವಿಗಾಗಿ ಸರ್ಕಾರ ಆಸರೆ ಯೋಜನೆಯಡಿ ಮನೆಗಳ ನಿರ್ಮಾಣಕ್ಕಾಗಿ ಅವಶ್ಯವಿರುವ 649 ಎಕರೆ ಭೂಮಿಯನ್ನು ರೈತರೊಂದಿಗೆ ಚರ್ಚಿಸಿ, ಉತ್ತಮ ಬೆಲೆಯಲ್ಲಿ ಖರೀದಿಸಿ ಆ ಜಮೀನುಗಳಲ್ಲಿ 6,795 ಮನೆಗಳನ್ನು ರಾಜೀವಗಾಂಧಿ ವಸತಿ ನಿಗಮ, ನಿರ್ಮಿತಿ ಕೇಂದ್ರಗಳು ಹಾಗೂ ವಿವಿಧ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ನೂತನ ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗಾಗಿ ಸರ್ಕಾರ ರು. 12.23 ಕೋಟಿ ಹಾಗೂ ಅಲ್ಲಿನ ರಸ್ತೆಗಳ ಅಭಿವೃದ್ಧಿಗಾಗಿ ರು. 12.64 ಕೋಟಿ ವ್ಯಯ ಮಾಡಿದ್ದು, ನಿರ್ಮಾಣವಾಗಿರುವ ಮನೆಗಳನ್ನು ಹಸ್ತಾಂತರಿಸಲಾಗಿದೆ.
ಪರಿಹಾರದಲ್ಲಿಯೂ ದಾಖಲೆ: ಸರ್ಕಾರ ಕೇವಲ ಸೂರು ಕಳೆದುಕೊಂಡವರಿಗೆ ಶಾಶ್ವತ ಸೂರು ಮಾತ್ರವಲ್ಲ, ಅಂದು ತೊಂದರೆಗೊಳಗಾದವರಿಗೆ ಸಂಪೂರ್ಣ ಮನೆ ಬಿದ್ದು ಹೋಗಿರುವವರಿಗೆ ರು. 30 ಸಾವಿರ ಹಾಗೂ ಭಾಗಶಃ ಮನೆ ಹಾಳಾಗಿರುವವರಿಗೆ ರು. 7500, ಸಣ್ಣ ಪುಟ್ಟ ದುರಸ್ತಿಗಾಗಿ ರು. 3000 ಪರಿಹಾರ ನೀಡಿತ್ತು. ಇದು ರಾಜ್ಯದಲ್ಲಿಯೇ ಸೃಷ್ಟಿ ವಿಕೋಪದಲ್ಲಿ ತೊಂದರೆ ಅನುಭವಿಸಿದವರಿಗೆ ಸರ್ಕಾರದಿಂದ ಸಿಕ್ಕ ಅತ್ಯಂತ ಹೆಚ್ಚಿನ ಪರಿಹಾರ ಎನ್ನುವ ದಾಖಲೆಗೂ ಪಾತ್ರವಾಗಿತ್ತು. ಇದರೊಟ್ಟಿಗೆ ಪರಿಹಾರ ವಿತರಣೆಯಲ್ಲಿಯೂ ಅಲ್ಪ ಗೊಂದಲ ಉಂಟಾಗಿತ್ತು ಎನ್ನುವುದು ಗಮನಾರ್ಹ ವಿಷಯ.
ಮತಗಳಾಗಿ ಪರಿವರ್ತನೆ?: ಬಿಜೆಪಿ ಬಡವರಿಗೆ ಶಾಶ್ವತ ಸೂರು ಕಲ್ಪಿಸುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿದೆ. ಆದರೆ, ಮನೆಗಳ ವಿತರಣೆ ಹಾಗೂ ಪರಿಹಾರದ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ವಿರೋಧ ಪಕ್ಷ ಕಾಂಗ್ರೆಸ್ ಈ ಹಿಂದೆ ಆರೋಪಿಸಿತ್ತು. ಇದಕ್ಕೆ ಕಿವಿಗೊಡದ ಬಿಜೆಪಿ ಮಾತ್ರ ರಾಜ್ಯದ ಇತಿಹಾಸದಲ್ಲಿಯೇ ಇಷ್ಟೊಂದು ಪ್ರಮಾಣದಲ್ಲಿ ಮನೆಗಳನ್ನು ಕಟ್ಟಿದ ದಾಖಲೆ ಇಲ್ಲ. ಹಾಗಾಗಿ ಇದು ನಮ್ಮ ದೊಡ್ಡ ಸಾಧನೆ. ಇಂದು ಶಾಶ್ವತ ಸೂರಿನಡಿಯಲ್ಲಿ ನೆಮ್ಮದಿ ಜೀವನ ನಡೆಸುತ್ತಿರುವ ಪ್ರತಿಯೊಬ್ಬರೂ ಬೆಂಬಲಿಸುತ್ತಾರೆನ್ನುವ ವಿಶ್ವಾಸ ಬಿಜೆಪಿಗಿದೆ. ಈ ಯೋಜನೆ ಫಲಾನುಭವಿಗಳೆಲ್ಲ ಬಿಜೆಪಿಯನ್ನು ಬೆಂಬಲಿಸುತ್ತಾರೆಯೇ ಎನ್ನುವುದನ್ನು ಕಾದುನೋಡಬೇಕಿದೆ.
ನರಗುಂದ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳು
ಜಿಲ್ಲೆಯಲ್ಲಿ ಪ್ರವಾಹದಿಂದ ಪದೇ ಪದೇ ತೊಂದರೆ ಅನುಭವಿಸುತ್ತಿದ್ದ 14 ಗ್ರಾಮಗಳಲ್ಲಿ 13 ಗ್ರಾಮಗಳು ನರಗುಂದ ಕ್ಷೇತ್ರ ವ್ಯಾಪ್ತಿಯಲ್ಲಿವೆ. ಬಸರಕೋಡ ಗ್ರಾಮ ಮಾತ್ರ ರೋಣ ಕ್ಷೇತ್ರದಲ್ಲಿದೆ. ಹಾಗಾಗಿ ಪ್ರವಾಹದ ಸಂದರ್ಭದಲ್ಲಿ ಹಾಗೂ ತೊಂದರೆ ಅನುಭವಿಸಿದ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸುವ ನಿಟ್ಟಿನಲ್ಲಿ ಅಂದಿನ ಸಿಎಂ ಬಿಎಸ್‌ವೈ ಮೇಲೆ ಒತ್ತಡ ಹಾಕಿ ಶ್ರಮಿಸಿದ್ದು ಹಾಲಿ ಶಾಸಕ ಸಿ.ಸಿ. ಪಾಟೀಲ ಹಾಗೂ ಸದ್ಯದ ಜಿಲ್ಲಾ ಉಸ್ತುವಾರಿ ಕಳಕಪ್ಪ ಬಂಡಿ. ಇವರ ಹೆಚ್ಚಿನ ಪ್ರಯತ್ನದಿಂದಾಗಿಯೆ ಅಲ್ಲಿನ ಜನತೆಗೆ ಸೂರು ಸಾಧ್ಯವಾಯಿತು ಎನ್ನುವ ಮೆಚ್ಚುಗೆಯ ಮಾತುಗಳು ಗ್ರಾಮಗಳಿಂದ ಕೇಳಿ ಬರುತ್ತಿವೆ. ಇದರೊಟ್ಟಿಗೆ ಕೆಲ ಗ್ರಾಮಗಳ ಮನೆಗಳ ಕಾಮಗಾರಿಗಳು ತೃಪ್ತಿಕರವಾಗಿಲ್ಲ ಎನ್ನುವ ದೂರು ಕೇಳಿ ಬರುತ್ತಿದೆ.
-ಶಿವಕುಮಾರ ಕುಷ್ಟಗಿ