ಬಿಎಸ್ಸಾರ್ ಬೆಂಬಲಿಸಿ: ರೇಶ್ಮೆ
ಕನ್ನಡಪ್ರಭ ವಾರ್ತೆ, ಗದಗ, ಏ. 30
ಗದಗ ವಿಧಾನಸಭೆ ಚುನಾವಣೆ ಬಿಎಸ್ಆರ್ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಮಧ್ಯೆ ಜರಗುತ್ತಿರುವ ವಿಶಿಷ್ಟ ಸಮರವಾಗಿದ್ದು, ಈ ಕ್ಷೇತ್ರದ ಪ್ರಬುದ್ಧ ಮತದಾರರು ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ಆದ್ಯತೆ ನೀಡಲಿದ್ದಾರೆ ಎಂದು ಬಿಎಸ್ಆರ್ ಕಾಂಗ್ರೆಸ್ನ ರಾಜ್ಯ ವಕ್ತಾರ ರವೀಂದ್ರ ರೇಶ್ಮೆ ಹೇಳಿದರು.
ಅವರು ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಥಳೀಯ ಕಾಂಗ್ರೆಸ್ ನಾಯಕರ ಕುರಿತು ಜನರಲ್ಲಿ ಉತ್ತಮ ಭಾವನೆಗಳಿದ್ದರೂ ಸಹ ಅವರು ಕಾಂಗ್ರೆಸ್ನ ಮೂಲ ಗೂಂಡಾಗಿರಿ ಸಂಸ್ಕೃತಿಯಿಂದ ಹೊರಬರದಿರುವುದು ವಿಷಾದದ ಸಂಗತಿ.
ರಾಜಕಾರಣದಲ್ಲಿ ಬೆದರಿಕೆ, ತಂತ್ರಗಾರಿಕೆಯು ಕೆಲ ದಿನಗಳಿಂದ ಬಿಎಸ್ಆರ್ನ ನಗರಸಭೆಯ ಸದಸ್ಯರ ಮತ್ತು ಕಾರ್ಯಕರ್ತರ ಮೇಲೆ ನಡೆಯುತ್ತಿದೆ. ಸ್ಥಳೀಯ ನಾಯಕರು ಹತಾಶರಾಗಿ ಸ್ಥಿಮಿತ ಕಳೆದುಕೊಂಡವರಂತೆ ಆಡುತ್ತಿರುವ ಕಾರ್ಯಕರ್ತರನ್ನು ಮತ್ತು ಪಕ್ಷದ ಪ್ರಮುಖ ಪದಾಧಿಕಾರಿಗಳನ್ನು ಹದ್ದು ಬಸ್ತಿನಲ್ಲಿಡುವ ಕಾರ್ಯ ಮಾಡಬೇಕಾಗಿದೆ.
ರಾಜ್ಯದ ಜನರ ಹಿತಕಾಯಲು, ಅಭಿವೃದ್ಧಿ ಗಮನದಲ್ಲಿರಿಸಿಕೊಂಡು ಬಿಎಸ್ಆರ್ ಕಾಂಗ್ರೆಸ್ ಪ್ರಾದೇಶಿಕ ಪಕ್ಷವಾಗಿ ಹೊರಹೊಮ್ಮಿದೆ. ಜನತೆ ಬಿಎಸ್ಆರ್ ಬೆಂಬಲಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಗದಗ ಮತಕ್ಷೇತ್ರದ ಅಭ್ಯರ್ಥಿ ಅನಿಲ ಮೆಣಸಿನಕಾಯಿ, ರಾಜ್ಯ ಬಿಎಸ್ಆರ್ ಕಾಂಗ್ರೆಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಭಿಷೇಕಗೌಡ, ನಗರಸಭಾ ಸದಸ್ಯ ಎಂ.ಎಚ್. ಮುಳಗುಂದ, ರಾಘವೇಂದ್ರ ಯಳವತ್ತಿ, ಶ್ರಿನಿವಾಸ ಕರಿ, ನಾಗಲಿಂಗ ಐಲಿ, ಮೌಲಾಸಾಬ ಮಾನ್ವಿ, ಮುನೀರ ಅಹ್ಮದ ಡಾಲಾಯತ, ಎಂ. ಇಸ್ಮಾಯಿಲ್, ಬಸವಣ್ಣಯ್ಯ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.