ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಿಜೆಪಿಯಿಂದ ಕೀಳು ಮಟ್ಟದ ರಾಜಕಾರಣ: ಎಚ್ಕೆ

Vishwanath S
Updated On : 1 May 2013, 11:20 am

ಕನ್ನಡಪ್ರಭ ವಾರ್ತೆ, ಗದಗ, ಏ. 30
ತಮ್ಮ ಎಡ, ಬಲಕ್ಕೆ ಚಾರ್ಜ್ಶೀಟ್ಗಳಿರುವ ನಾಯಕರಿಗೆ ಸಜ್ಜನಿಕೆಯ ಬಗ್ಗೆ ಸ್ಪಷ್ಟವಾದ ಅರ್ಥ ಗೊತ್ತಿರುವುದಿಲ್ಲ ಎಂದು ಮಾಜಿ ಸಚಿವ, ಗದಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ. ಪಾಟೀಲ ಹೇಳಿದರು.
ಮಂಗಳವಾರ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಸಂಜೆ ಗದಗನಲ್ಲಿ ಪರೋಕ್ಷವಾಗಿ ಅವರನ್ನು ಟೀಕಿಸಿದ ಅನಂತಕುಮಾರ ಅವರಿಗೆ ಟಾಂಗ್ ನೀಡಿದರು.
ಅವರ ರಾಷ್ಟ್ರೀಯ ನಾಯಕರಾದ ಎಲ್.ಕೆ. ಆಡ್ವಾಣಿ ಅವರು ಬಿಎಸ್ವೈ ಅಧಿಕಾರದಲ್ಲಿದ್ದ ವೇಳೆಯಲ್ಲಿ ಹಣ ಪಡೆದಿರುವ ಬಗ್ಗೆ ಧನಂಜಯಕುಮಾರ ಮಾಡಿರುವ ಆರೋಪದಿಂದ ಅವರಿಗೆ ಇಂದಿಗೂ ಹೊರಬರಲು ಸಾಧ್ಯವಾಗಿಲ್ಲ. ಆ ಗೊಂದಲದಲ್ಲಿರುವ ಅವರು ಸಾರ್ವಜನಿಕರಿಂದ ಅದನ್ನು ಮರೆ ಮಾಚಲು ಗದುಗಿಗೆ ಬಂದಾಗ, ಕಾಂಗ್ರೆಸ್ ನಾಯಕರ ಬಗ್ಗೆ ಮತ್ತು ಪಕ್ಷದ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡುತ್ತಿರುವುದು ಅವರ ಸಂಸ್ಕೃತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಭಿವೃದ್ಧಿ ವಿರೋಧಿ ನೀತಿಗಳಿಂದ ಜನತೆ ಬೇಸತ್ತಿದ್ದಾರೆ. ಈ ಬಾರಿ ಗದಗ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು. ಗದಗ ನಗರದಲ್ಲಿ ನಾವು ಪ್ರಾರಂಭಿಸಿದ ಶುದ್ಧ ಕುಡಿವ ನೀರಿನ ಘಟಕಕ್ಕೆ ಇಲ್ಲಿನ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದಲ್ಲದೆ ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಜನತೆ ನಮ್ಮ ಪ್ರಯತ್ನವನ್ನು ಗುರುತಿಸಿದ್ದಾರೆ. ಕೇಂದ್ರ ಸರ್ಕಾರವೂ ಈ ಯೋಜನೆಯನ್ನು ವಿಸ್ತರಿಸಲು ರು. 1400 ಕೋಟಿ ಮೀಸಲಿಟ್ಟಿದೆ ಎಂದರೆ ಯೋಜನೆ ಪ್ರಾಮುಖ್ಯತೆ ಎಷ್ಟಿದೆ ಎನ್ನುವುದನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು ಎಂದರು. ಗದಗ ಜಿಲ್ಲೆ ಶಾಶ್ವತ ಬರ ಪೀಡಿತ ಜಿಲ್ಲೆ ಎಂಬ ಹಣೆಪಟ್ಟಿಯಿಂದ ಹೊರತರಲು ಕಾಂಗ್ರೆಸ್ ಸರ್ಕಾರ ಸಿಂಗಟಾಲೂರು ಯೋಜನೆಯನ್ನು ವಿಸ್ತರಿಸಿದ್ದು 1.70 ಲಕ್ಷ ಎಕರೆ ರೈತರ ಭೂಮಿಗೆ ನೀರು ಕಲ್ಪಿಸಲು ಪ್ರಯತ್ನಿಸಲಾಗಿದೆ. ಜಿಲ್ಲೆಯಾದ್ಯಂತ 2700ಕ್ಕೂ ಹೆಚ್ಚು ಇಂಗು ಕೆರೆಗಳ ನಿರ್ಮಾಣ ಮಾಡಿ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಆದ್ಯತೆ ನೀಡಲಾಗಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಬರಗಾಲವನ್ನು ಹೋಗಲಾಡಿಸಲು ಮೋಡ ಬಿತ್ತನೆಯಂತಹ ವೈಜ್ಞಾನಿಕ ಚಿಂತನೆಯನ್ನು ಕಾಂಗ್ರೆಸ್ ಮಾಡಿದೆ. ಗದಗ ನಗರದಲ್ಲಿ ಬಡವರಿಗೆ ಶಾಶ್ವತ ಸೂರು ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ವಸತಿ ಯೋಜನೆಗಳಲ್ಲಿ 14,000 ಮನೆಗಳನ್ನು ನಿರ್ಮಿಸಲಾಗಿದ್ದು, ಇದೆಲ್ಲ ಅಭಿವೃದ್ದಿಯಲ್ಲವೇ ಎಂದು ಎಚ್.ಕೆ. ಪಾಟೀಲ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎನ್ನುವವರ ಆರೋಪಕ್ಕೆ ತಿರುಗೇಟು ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement