ಲೋಕ ಜನಶಕ್ತಿ ಅಭ್ಯರ್ಥಿಯಿಂದ ಜಿ.ಎಸ್. ಪಾಟೀಲರಿಗೆ ಬೆಂಬಲ
ರೋಣ: ರೋಣ ವಿಧಾನಸಭಾ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ, ಕ್ಷೇತ್ರದ ಸರ್ವ ಜನರ ಸರ್ವತೋಮುಖ ಬೆಳವಣಿಗೆಗಾಗಿ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲರನ್ನು ಬೆಂಬಲಿಸಿದ್ದೇನೆ ಎಂದು ರೋಣ ವಿಧಾನಸಭಾ ಮತಕ್ಷೇತ್ರದ ಲೋಕ ಜನಶಕ್ತಿ ಪಕ್ಷದ ಅಭ್ಯರ್ಥಿ ಫಕೀರಪ್ಪ ತೆಗ್ಗಿನಮನಿ ಹೇಳಿದರು.
ಅವರು ಮಂಗಳವಾರ ಐ.ಎಸ್. ಪಾಟೀಲರ ಸಮ್ಮುಖದಲ್ಲಿ ಬೆಂಬಲ ನೀಡಿ ಮಾತನಾಡಿದರು. ಕಾಂಗ್ರೆಸ್ ಪಕ್ಷವು 128 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದೆ. ಈ ಪಕ್ಷ ಸಮಾಜದಲ್ಲಿರುವ ಎಲ್ಲ ಧರ್ಮ ಹಾಗೂ ಸಮಾಜಗಳ ಜನರ ಹಿತ ಕಾಪಾಡಲು ಶ್ರಮಿಸಿದೆ. ಜಿ.ಎಸ್. ಪಾಟೀಲರು ತಮ್ಮ ಎರಡು ವರ್ಷಗಳ ಶಾಸಕತ್ವದ ಅವಧಿಯಲ್ಲಿ ರೋಣ ಕ್ಷೇತ್ರಕ್ಕೆ ಹಲವಾರು ಅಭವೃದ್ಧಿ ಪರ ಕಾರ್ಯಗಳನ್ನು ಮಾಡಿದ್ದಾರೆ. ಅಧಿಕಾರ ಇಲ್ಲದೆ ಇರುವಾಗಲೂ ಎಸ್.ಆರ್. ಪಾಟೀಲ ಪ್ರತಿಷ್ಠಾನದ ಮೂಲಕ ಹಲವಾರು ಸಮಾಜ ಉಪಯೋಗಿ ಚಟುವಟಿಕೆ ಮಾಡಿದ್ದಾರೆ ಎಂದರು.
ರೋಣ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐ.ಎಸ್. ಪಾಟೀಲ ಮಾತನಾಡಿ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿಯುವುದು ಶತಸಿದ್ಧ. ಕಾಂಗ್ರೆಸ್ ಸಮಾಜದಲ್ಲಿರುವ ಎಲ್ಲ ವರ್ಗಗಳ ಹಿತ ಕಾಪಾಡುವಲ್ಲಿ ಬದ್ಧವಾಗಿದೆ. ಲೋಕ ಜನಶಕ್ತಿ ಅಭ್ಯರ್ಥಿ ಬೆಂಬಲ ನೀಡಿರುವುದು ಮತ್ತಷ್ಟು ಸಹಕಾರಿಯಾಗಿದೆ ಎಂದರು. ಈ ಸಂದರ್ಭದಲ್ಲಿ ರಾಜೇಂದ್ರ ಪಾಟೀಲ, ಚಂದಪ್ಪ ಭಾವಿಮನಿ, ಪ್ರಕಾಶ ಹೊಸಳ್ಳಿ, ದೇವಪ್ಪ ಹಂಚಿನಾಳ, ಮುತ್ತಪ್ಪ ಹಿರೇಹಾಳ, ಮಲ್ಲಿಕಾರ್ಜುನ ಹಿರೇಹಾಳ, ಮುತ್ತಪ್ಪ ತೆಗ್ಗಿನಮನಿ, ಸಂಗನಬಸಪ್ಪ ಹಾದಿಮನಿ ಪಾಲ್ಗೊಂಡಿದ್ದರು.