ಓಬಿಸಿಯಿಂದ ಕಬ್ಬು ಬೆಳೆಗಾರರಿಗೆ ಅನುಕೂಲ
ಕನ್ನಡಪ್ರಭ ವಾರ್ತೆ, ಮುಂಡರಗಿ, ಆ. 1
ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (ಓಬಿಸಿ)ನಿಂದ ಕಬ್ಬು ಬೆಳೆಯುವ ರೈತರಿಗೆ ಸಾಲ ಕೊಡಿಸುತ್ತಿದ್ದು, ಅದರಿಂದ ರೈತರಿಗೆ ಕೇವಲ ಶೇ. 8ರಷ್ಟು ಮಾತ್ರ ಬಡ್ಡಿ ನೀಡಬೇಕಾಗುತ್ತದೆ. ಈ ಬ್ಯಾಂಕ್‌ನಿಂದ ರೈತರಿಗೆ ಅನುಕೂಲವಾಗಿದೆ ಎಂದು ಗಂಗಾಪುರ ವಿಜಯನಗರ ಶುಗರ್ಸ್ ಮುಖ್ಯಸ್ಥ ಪಿ. ರಾಜಗೋಪಾಲ್ ಹೇಳಿದರು.
ಅವರು ಗುರುವಾರ ಗಂಗಾಪುರ ವಿಜಯ ನಗರ ಸಕ್ಕರೆ ಕಾರ್ಖಾನೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಜಯನಗರ ಸಕ್ಕರೆ ಕಾರ್ಖಾನೆಯಿಂದ ಈ ಭಾಗದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಕೆಲವರು ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ. ಈ ಮೊದಲು ವಿಜಯನಗರ ಸಕ್ಕರೆ ಕಾರ್ಖಾನೆಗೆ ಬರುವ ಎಲ್ಲ ಜಿಲ್ಲೆಯ ಪ್ರತಿ ತಾಲೂಕಿನ ರೈತರಿಗೆ ಕಾರ್ಖಾನೆ ಮೂಲಕ ಸಾಲ ನೀಡಲಾಗುತ್ತಿತ್ತು. ಈಗ ಕಬ್ಬು ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗಿದ್ದು, ನಾವು ಓಬಿಸಿ ಜತೆ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ರೈತರಿಗೆ ಬ್ಯಾಂಕಿನಿಂದಲೇ ಸಾಲ ನೀಡಲಾಗುತ್ತಿದೆ. ರೈತರಿಗೆ ಶೇ. 8ರ ಬಡ್ಡಿ ದರದಲ್ಲಿ ಸಾಲ ದೊರೆಯುತ್ತಿದೆ. ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ನಲ್ಲಿ ಸಾಲ ಪಡೆದ ರೈತರ ಪಹಣಿ ಪತ್ರಿಕೆ ಮೇಲೆ ಭೋಜಾ ದಾಖಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ವರ್ಷ 20 ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದ್ದು, ರೈತರಿಗೆ ಬೀಜ, ಗೊಬ್ಬರಗಳಿಗಾಗಿ ಕೊಡಬೇಕಾದ ಹಣ ಸುಮಾರು ರು. 30 ಕೋಟಿ ತಲುಪಲಿರುವುದರಿಂದ ರೈತರಿಗೆ ಓಬಿಸಿ ಮೂಲಕ ಸಾಲ ಪಡೆಯಲು ತಿಳಿಸಲಾಗಿದೆ. ಈ ಹಿಂದೆ 3 ವರ್ಷದಲ್ಲಿ ಬೀಜ, ಗೊಬ್ಬರಕ್ಕಾಗಿ ನೀಡಿದ್ದ ಹಣ ರು. 3 ಕೋಟಿ ಇನ್ನೂ ರೈತರಿಂದ ಬರಬೇಕಾಗಿದೆ. ಕಬ್ಬು ಕಡಿಯಲು ಹಾಗೂ ತೆಗೆದುಕೊಂಡು ಬರುವ ವೆಚ್ಚವನ್ನೂ ಸಹ ಕಾರ್ಖಾನೆಯೇ ಭರಿಸುವುದರಿಂದ ಪ್ರತಿವರ್ಷ ರು. 12ರಿಂದ 14 ಲಕ್ಷ ಅದಕ್ಕಾಗಿ ಮುಂಗಡ ನೀಡಲಾಗುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಿ. ಶಿವರಾಮರಡ್ಡಿ, ಅನಿಲ್, ಎಚ್.ಪಿ. ಧರ್ಮೇಂದ್ರ, ರೈತ ಈಶ್ವರಪ್ಪ ಹಂಚಿನಾಳ, ವೀರೇಶ ಶಾಸ್ತ್ರಿಮಠ, ಶರಣಪ್ಪ ಚೆನ್ನಳ್ಳಿ, ಗುಡದಪ್ಪ ಜಂತ್ಲಿ, ದೇವಪ್ಪ ಕಟ್ಟಿಮನಿ, ಇಸ್ಮಾಯಿಲ್ ಕವಲೂರ ಉಪಸ್ಥಿತರಿದ್ದರು.