ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕ್ಷೀರಭಾಗ್ಯ ಉತ್ತಮ ಯೋಜನೆ

Lingaraj Badiger
Updated On : 2 Aug 2013, 10:48 am

ಕನ್ನಡಪ್ರಭ ವಾರ್ತೆ, ಗದಗ, ಆ. 1
ಮಕ್ಕಳಲ್ಲಿನ ಅಪೌಷ್ಟಿಕತೆ, ರಕ್ತಹೀನತೆಯನ್ನು ನಿವಾರಿಸಲು ಇಂದು ಸರ್ಕಾರವು ಹಲವು ಯೋಜನೆ ರೂಪಿಸುತ್ತಿದ್ದು, ಈಗಾಗಲೇ ವಿದ್ಯಾರ್ಥಿಗಳಿಗೆ ಬಿಸಿಯೂಟ ಯೋಜನೆ ಜಾರಿಗೊಳಿಸಿದ್ದು, ಇಂದಿನಿಂದ ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ ಹಾಲು ವಿತರಣೆ ಮಾಡಲಾಗುತ್ತಿದೆ ಎಂದು ಜಿಪಂ ಸಿಇಒ ವೀರಣ್ಣ ತುರಮರಿ ಹೇಳಿದರು.
ಅವರು ಗುರುವಾರ ಸ್ಥಳೀಯ ಎಸ್.ಎಂ. ಕೃಷ್ಣ ನಗರದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಆಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಹಾಲು ಒಕ್ಕೂಟ ಧಾರವಾಡ ಇವರ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಹಾಗೂ ಶಾಲಾ ಮಕ್ಕಳಿಗೆ ಹಾಲು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ಅಂಗನವಾಡಿಗಳಿಗೆ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1ನೇ ತರಗತಿಯಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಹಾಲು ಒದಗಿಸಲು ಮುಂದಾಗಿದ್ದು, ಇದರಿಂದ ಮಕ್ಕಳ ಆರೋಗ್ಯವನ್ನು ಕಾಪಾಡುವ ಜತೆಗೆ ಶಾಲೆಯಲ್ಲಿ ನಿರೀಕ್ಷಿತ ಹಾಜರಾತಿಯನ್ನು ಕಾಯ್ದುಕೊಳ್ಳುವ ಗುರಿಯಿದೆ. ವಾರದಲ್ಲಿ 3 ದಿನ ಹಾಲು ವಿತರಿಸಲಾಗುತ್ತಿದ್ದು, ಪ್ರತಿ ಮಗುವಿಗೆ ಒಂದು ಬಾರಿಗೆ 150 ಮಿಲಿ ಲೀಟರ್ ಹಾಲು ವಿತರಿಸಲಾಗುವುದು. ಇದು ರಾಜ್ಯದಲ್ಲಿಯೇ ಮಾದರಿ ಯೋಜನೆಯೊಂದನ್ನು ಜಾರಿಗೊಳಿಸುತ್ತಿರುವುದು ಮಕ್ಕಳಲ್ಲಿ, ಪಾಲಕರಲ್ಲಿ ಸಂತಸವನ್ನುಂಟು ಮಾಡಿದೆ. ಬರೀ ಉಳ್ಳವರ ಮಕ್ಕಳು, ಆರ್ಥಿಕ ಸಬಲರು ಸೇವಿಸುತ್ತಿದ್ದ ಹಾಲು, ಸಮಾಜದ ಕಟ್ಟಕಡೆಯ ಮಗುವಿಗೂ ಶಾಲೆಯಲ್ಲಿ ದೊರೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
1,27,944 ಮಕ್ಕಳಿಗೆ ಹಾಲು ವಿತರಣೆ: ಗದಗ ತಾಲೂಕಿನಲ್ಲಿ 209 ಶಾಲೆಗಳಿದ್ದು, 35244 ಮಕ್ಕಳಿದ್ದು, 7613 ಕೆಜಿ ಹಾಲಿನ ಪೌಡರ್ ವಿತರಿಸಲಾಗುತ್ತಿದೆ. ಮುಂಡರಗಿ ತಾಲೂಕಿನಲ್ಲಿ 108 ಶಾಲೆಗಳಲ್ಲಿ 18346 ಮಕ್ಕಳಿದ್ದು, 3963 ಕೆಜಿ, ರೋಣ ತಾಲೂಕಿನಲ್ಲಿ 194 ಶಾಲೆಗಳಲ್ಲಿ 33784 ಮಕ್ಕಳಿದ್ದು, 7297 ಕೆಜಿ ಹಾಲಿನ ಪೌಡರ್, ಶಿರಹಟ್ಟಿ ತಾಲೂಕಿನಲ್ಲಿ 154 ಶಾಲೆಗಳಲ್ಲಿನ 27984 ಮಕ್ಕಳಿಗೆ 6045 ಕೆಜಿ ಹಾಲಿನ ಪೌಡರ್, ನರಗುಂದ ತಾಲೂಕಿನ 71 ಶಾಲೆಗಳಲ್ಲಿ 12586 ಮಕ್ಕಳಿದ್ದು, 2719 ಕೆಜಿ ಹಾಲಿನ ಪೌಡರ್, ಅಲ್ಲದೇ ಜಿಲ್ಲೆಯಲ್ಲಿನ ಅಂಗನವಾಡಿಗಳಲ್ಲಿರುವ 90719 ಮಕ್ಕಳಿಗೂ ಹಾಲು ವಿತರಿಸಲಾಗುತ್ತಿದೆ. ಒಟ್ಟು ಜಿಲ್ಲೆಯಲ್ಲಿ 736 ಅಡುಗೆ ಕೇಂದ್ರಗಳಿದ್ದು, ಇಂದು 686 ಶಾಲೆಗಳಲ್ಲಿ 1,27,994 ಮಕ್ಕಳಿಗೆ ಹಾಲು ವಿತರಿಸಲಾಗುತ್ತದೆ. ಒಟ್ಟು ಜಿಲ್ಲೆಯಾದ್ಯಂತ 27,637 ಕೆಜಿ ಹಾಲಿನ ಪುಡಿಯನ್ನು ವಿತರಿಸಲಾಗುತ್ತಿದೆ ಎಂದರು.  
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ. ಮಾತನಾಡಿ, ದೇಶದ ಭವಿಷ್ಯ ವಿದ್ಯಾರ್ಥಿಗಳ ಮೇಲಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಸೂಕ್ತ ಆಹಾರವನ್ನು ನೀಡಿ ಮಕ್ಕಳನ್ನು ಆರೋಗ್ಯವಂತರನ್ನಾಗಿಸುವುದು ಸರ್ಕಾರದ ಉದ್ದೇಶವಾಗಿದೆ. ಇಂದಿನಿಂದ ರಾಜ್ಯಾದ್ಯಂತ 65 ಲಕ್ಷ ಶಾಲಾ ಮಕ್ಕಳಿಗೆ ಹಾಗೂ 39 ಲಕ್ಷ ಅಂಗನವಾಡಿ ಮಕ್ಕಳಿಗೆ ಹಾಲು ವಿತರಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಡಿಡಿಪಿಐ ರಾಜೀವ್ ನಾಯಕ, ಡಿಎಚ್‌ಓ ಡಿ.ಬಿ. ಚೆನ್ನಶೆಟ್ಟಿ, ಪಶುಸಂಗೋಪನಾ ಇಲಾಖೆ ಅಧಿಕಾರಿ ವಿ.ಜಿ. ಬಂಡಿ, ಕೆಎಂಎಫ್ ಧಾರವಾಡದ ಅಧಿಕಾರಿ ಮಹದೇವಪ್ಪ ಮಡಿವಾಳರ ಮುಂತಾದವರು ಉಪಸ್ಥಿತರಿದ್ದರು. ಎಸ್.ಎನ್. ಲಮಾಣಿ ಪ್ರಾರ್ಥಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಚ್.ಎಸ್. ಪರಮೇಶ್ವರಪ್ಪ ಸ್ವಾಗತಿಸಿದರು. ಎಚ್.ಆರ್. ಕೊಣ್ಣನ್ನವರ ನಿರೂಪಿಸಿದರು. ಐ.ಬೆ. ಬೆನಕೊಪ್ಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement