ಜನಸಂಖ್ಯಾ ನಿಯಂತ್ರಣ ನಮ್ಮೆಲ್ಲರ ಆದ್ಯ ಕರ್ತವ್ಯ
ಮುಂಡರಗಿ: ಜನಸಂಖ್ಯಾ ನಿಯಂತ್ರಣ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಈ ಕುರಿತು ಸಾರ್ವಜನಿಕರು ಅರಿವು ಹೊಂದುವ ಮೂಲಕ ಜನಸಂಖ್ಯಾ ನಿಯಂತ್ರಣಕ್ಕೆ ಆದ್ಯತೆ ನೀಡಬೇಕು ಎಂದು ಪುರಸಭೆ ಮಾಜಿ ಉಪಾಧ್ಯಕ್ಷ ರಾಮು ಕಲಾಲ ಹೇಳಿದರು. ಪಟ್ಟಣದ ಪುರಸಭೆ ಆವರಣದಲ್ಲಿರುವ ಗಾಂಧಿಭವನದಲ್ಲಿ ಇತ್ತೀಚಿಗೆ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ವಿಶ್ವಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರೊ. ಎ.ವೈ. ನವಲಗುಂದ ಮಾತನಾಡಿ, ಇಂದಿನ ಆಧುನಿಕ ದಿನಮಾನಗಳಲ್ಲಿ ಜನಸಂಖ್ಯೆ ಮಿತಿಮೀರಿ ಬೆಳೆಯುತ್ತಿರುವುದರಿಂದ ದೇಶದಲ್ಲಿ ಆಹಾರ ಸಮಸ್ಯೆ ಸೇರಿದಂತೆ ಮೂಲಭೂತ ಸಮಸ್ಯೆಗಳು ಉದ್ಭವವಾಗುತ್ತಿವೆ. ಇದರ ನಿಯಂತ್ರಣ ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಹಿಂದೆ ಜನಸಂಖ್ಯಾ ನಿಯಂತ್ರಣಕ್ಕೆ ಅನೇಕ ಸಾಂಕ್ರಾಮಿಕ ರೋಗಗಳಿದ್ದವು. ಇಂದು ವೈದ್ಯಕೀಯ ಸೌಲಭ್ಯಗಳಿಂದ ಮರಣ ಪ್ರಮಾಣ ಕಡಿಮೆಯಾಗಿದೆ. ಇದರಿಂದಾಗಿ ಜನಸಂಖ್ಯೆ ನಾಗಾಲೋಟದಿಂದ ಬೆಳಯುತ್ತಿದ್ದು, ಈ ಕುರಿತು ಜಾಗೃತಿ ಹೊಂದುವ ಮೂಲಕ ಜನಸಂಖ್ಯೆ ನಿಯಂತ್ರಿಸುವಂತೆ ಕರೆ ನೀಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಎಂ. ಸೊಲ್ಲಾಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್.ಐ.ಪರಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ದ್ರುವಕುಮಾರ ಹೊಸಮನಿ ನೆರವೇರಿಸಿದರು. ಈ ಸಂದರ್ಭದಲ್ಲಿ ಶಿಕ್ಷಕ ಎಂ.ಎ.ಬಳ್ಳಾರಿ, ಎಸ್.ಕೆ. ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಸಿ.ಕೆ. ಕುಲಕರ್ಣಿ ಪ್ರಾರ್ಥಿಸಿದರು. ಕೆ.ಪಿ. ಗಂಭೀರ ಸ್ವಾಗತಿಸಿದರು. ಎನ್.ಬಿ. ಅಳವಂಡಿ ನಿರೂಪಿಸಿದರು.
ಇಂದು ಉಚಿತ ತಪಾಸಣೆ ಶಿಬಿರ
ಗದಗ: ನಗರದ ಧರ್ಮಶ್ರೀ ಸುಂದರಮ್ಮ ಟೆಂಗಿನಕಾಯಿ ಪ್ರತಿಷ್ಠಾನದ ಆಶ್ರಯದಲ್ಲಿ ರೋಣ ತಾಲೂಕಿನ ಮುದೇನಗುಡಿ ಗ್ರಾಮದಲ್ಲಿ ಸಿದ್ಧಶಿವಯೋಗಿಗಳವರ ಮಂದಿರದಲ್ಲಿ ಗುಡಿಸಾಗರ ಸಿದ್ಧ ಶಿವಯೋಗಿಗಳವರ ಪುಣ್ಯಸ್ಮರಣೋತ್ಸವದ ನಿಮಿತ್ತ ಹಾಗೂ ಬಿ.ಜಿ. ಅಣ್ಣಿಗೇರಿ ಗುರುಗಳ 83ನೇ ಜನ್ಮದಿನೋತ್ಸವ ಅಂಗವಾಗಿ ಆ. 2 ರಂದು ಗದುಗಿನ ಹಿರಿಯ ಆಯುರ್ವೇದ ತಜ್ಞ ಡಾ.ಕೆ. ಯೋಗೇಶನ್ ಅವರಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಡೆಯಲಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ವರೆಗೆ ನಡೆಯುವ ಈ ಶಿಬಿರದಲ್ಲಿ ಜನತೆ ಪಾಲ್ಗೊಂಡು ಶಿಬಿರದ ಸದುಪಯೋಗಪಡಿಸಿಕೊಳ್ಳಲು ಸಂಘಟಿಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.