ಮನುಷ್ಯ ಧರ್ಮ ಪಾಲಿಸಿದರೆ ಜೀವನ ಪಾವನ: ನಿಜಗುಣಾನಂದ ಶ್ರೀ
ಮುಂಡರಗಿ: ಮನುಷ್ಯನ ಸಾಧನೆಗೆ ಮನಸ್ಸು ಮುಖ್ಯ. ಜಗತ್ತು ನಡೆಯುವುದು ಜಗದ್ಗುರುಗಳು ಮತ್ತು ಸನ್ಯಾಸಿಗಳಿಂದಲ್ಲ, ಅದು ಗ್ರಹಸ್ಥರಿಂದ ನಡೆಯುತ್ತದೆ ಎಂದು ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಶ್ರೀಗಳು ಹೇಳಿದರು.
ಈಚೆಗೆ ಅವರು ಪಟ್ಟಣದ ಜ. ತೋಂಟದಾರ್ಯ ಶಾಖಾಮಠದಲ್ಲಿ ಶಿವಶರಣ ಹಡಪದ ಅಪ್ಪಣ್ಣ ಸೇವಾ ಸಮಿತಿಯಿಂದ ನಡೆದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಹಡಪದವರು ಮಾಡುವ ವಿದ್ಯೆ ಜಾಗತಿಕ ಮಟ್ಟದ್ದು, ವಿದ್ಯೆ ವೃತ್ತಿಪರವಾಗಿದ್ದರೆ ಅದಕ್ಕೆ ಕಿಮ್ಮತ್ತು. ಅನೇಕ ವಿಶ್ವವಿದ್ಯಾಲಯಗಳಲ್ಲಿ ಹಡಪದ ಕಾಯಕವನ್ನು ವೃತ್ತಿಪರ ಶಿಕ್ಷಣಕ್ಕೆ ಅಳವಡಿಸುತ್ತಿರುವುದು ಕಂಡುಬರುತ್ತದೆ. ಶರಣರಲ್ಲಿ ಜಾತಿಗೆ ಕಿಮ್ಮತ್ತು ಇರಲಿಲ್ಲ. ಅವರು ಮಾಡುವ ಕಾಯಕಕ್ಕೆ ಬೆಲೆಯಿತ್ತು. ಜೀವನದಲ್ಲಿ ಗಳಿಸುವುದು ಮುಖ್ಯ. ಆದರೆ, ಅದನ್ನು ಮೋಸದಿಂದ ಗಳಿಸಬಾರದು. ಆ ಧರ್ಮ, ಈ ಧರ್ಮ ಎಂದು ಹೋರಾಟ ಮಾಡುವ ನಾವು ಮನುಷ್ಯ ಧರ್ಮವನ್ನು ಪಾಲಿಸಿದರೆ ಜೀವನ ಪಾವನವಾಗುತ್ತದೆ. ಹಡಪದ ಅಪ್ಪಣ್ಣನವರ ಆದರ್ಶ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕ. ಅಪ್ಪಣ್ಣ ಕೇವಲ ಹಡಪದ ಸಮಾಜದವರಿಗೆ ಮೀಸಲಲ್ಲ. ಅವರು ಸರ್ವ ವರ್ಗದ ಶರಣರು ಎಂದರು. ಗಂಗಾಧರ ದೇವರು ಮಾತನಾಡಿ, ಹಡಪದ ಲಿಂಗಮ್ಮ ಅವರು ರಚಿಸಿದ ವಚನಗಳು ಸಾರ್ವಕಾಲಿಕ ಎಂದರು. ಮಹಾಂತ ದೇವರು, ಗೋಣಿರುದ್ರ ದೇವರು, ಪ್ರವಚನಕಾರ ಕುಮಾರ ದೇವರು, ಶಿವಶರಣ ಹಡಪದ ಅಪ್ಪಣ್ಣ ಸೇವಾ ಸಮಿತಿ ಅಧ್ಯಕ್ಷ ದೇವು ಹಡಪದ, ದೇವರಾಜ ಹಡಪದ, ಮಹೇಶ ಹಡಪದ, ಅಂಬರೀಷ ಹಡಪದ, ಡಾ. ಶಂಕರ ಭಾವಿಮನಿ, ಶೇಖಪ್ಪ ಹಡಪದ, ಧ್ರುವಕುಮಾರ ಹೊಸಮನಿ, ಡಿ.ಡಿ. ಮೋರನಾಳ, ಸೊಲಬಣ್ಣ ಜೋಬಳಿ, ಕೊಟ್ರೇಶ ಅಂಗಡಿ, ಹನುಮಂತಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಎ.ಕೆ. ಮುಲ್ಲಾನವರ ಸ್ವಾಗತಿಸಿ, ನಿರೂಪಿಸಿದರು.