ಮಹಿಳೆಯರ ಶೋಷಣೆ ನಿಲ್ಲಲಿ: ಕವಿತಾ
ರೋಣ: ಮಹಿಳೆಯರ ಮೇಲೆ ದೌರ್ಜನ್ಯ, ಕಿರುಕುಳ, ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಇದರಿಂದ ಮಹಿಳಾ ಸಮುದಾಯ ಭಯದ ವಾತಾವರಣದಲ್ಲಿ ಕಾಲ ಕಳೆಯುವಂತಾಗಿದೆ. ಇದಕ್ಕೆ ಕಡಿವಾಣ ಹಾಕಲು ಅಪರಾಧಿಗಳಿಗೆ ಕಠಿಣ ಶಿಕ್ಷೆಯಂತಹ ಕಾನೂನು ಜಾರಿಯಾಗಬೇಕು ಎಂದು ಗದಗ ಜಿಲ್ಲಾ ಕಸಾಪ ಕಾರ್ಯದರ್ಶಿ ಕವಿತಾ ದಂಡಿನ ಹೇಳಿದರು.
ಅವರು ಮಂಗಳವಾರ ಸಂಜೆ ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ಬಸಮ್ಮ ಸಂಗನಗೌಡ ಪಾಟೀಲ ಇವರ 9ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಜರುಗಿದ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಖಾಸಗೀಕರಣ, ಉದಾರೀಕರಣ, ಜಾಗತೀಕರಣ ಮಧ್ಯೆ ತಾಯಿ (ಮಹಿಳೆ)ಗೆ ಸಿಗಬೇಕಾದ ಸ್ಥಾನ ಮಾನಗಳು ಸಿಗದಿರುವುದು ವಿಷಾದನೀಯ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ತನ್ನತನವನ್ನು ಅಭಿವ್ಯಕ್ತಗೊಳಿಸಿ, ಸಮಾಜದ ಮುಖ್ಯವಾಹಿನಿಗೆ ಬರಲು ಜಾಗೃತಳಾಗಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಅನ್ನಪೂರ್ಣಾ ಸರದೇಸಾಯಿ ಮಾತನಾಡಿ, ಭವಿಷ್ಯದ ಸುಂದರ ಬದುಕಿಗೆ ನೈತಿಕ ಪಾಠ ಹೇಳಿ ಕೊಟ್ಟ ಮಾತೃ ಹೃದಯ ಮೆಚ್ಚುವಂತದ್ದಾಗಿದೆ. ಮಕ್ಕಳಿಗೆ ನೈತಿಕ ಪಾಠ ಕಲಿಸಿ ಉತ್ತಮ ಸಂಸ್ಕಾರ ನೀಡಿ ಬದುಕನ್ನು ಹಸನುಗೊಳಿಸುವಲ್ಲಿ ತಾಯಿಯು ಸ್ಫೂರ್ತಿಯ ಚಿಲುಮೆಯಾಗಿದ್ದಾಳೆ. ದೇವರಿಗಿಂತ ತಾಯಿಯೇ ಶ್ರೇಷ್ಠಳಾಗಿದ್ದಾಳೆ ಎಂದರು. ಯಲಬುರ್ಗಿ ಸಿದ್ಧರಾಮೇಶ್ವರ ಶಿವಾಚಾರ್ಯ ಶ್ರೀಗಳು ಹಾಗೂ ಗುಲಗಂಜಿ ಮಠದ ಗುರುಪಾದ ಶ್ರೀಗಳು ಆಶೀರ್ವಚನ ನೀಡಿದರು. ಜಿಪಂ ಸದಸ್ಯೆ ಶಕುಂತಲಾ ಗಾಣಿಗೇರ, ಪ್ರಮೀಳಾ ಕೋರದ್ಯಾನಮಠ, ಅನ್ನಪೂರ್ಣಾ ಪಾಟೀಲ, ತಾಪಂ ಸದಸ್ಯೆ ಗಾಯತ್ರಿ ನಾಗನೂರ, ಮಾಲಾನಬಿ ಗಡಾದ, ಪುರಸಭೆ ಸದಸ್ಯೆ ರತ್ನಾ ಕೊಳ್ಳಿ, ನಾಜಬೇಗಂ ಯಲಿಗಾರ, ಜಯಶ್ರೀ ನವಲಗುಂದ, ವಿದ್ಯಾ ಬಡಿಗೇರ, ಯಮನವ್ವ ಜುಮ್ಮನಕಟ್ಟಿ, ಲಕ್ಷ್ಮೀ ಗಡಗಿ, ಗೀತಾ ಕೊಪ್ಪದ, ಪಪಂ ಮಾಜಿ ಅಧ್ಯಕ್ಷೆ ಸುರೇಖಾ ಕುರಿ, ಕೊತ್ಲಣ್ಣವರ, ಮಂಜುಳಾ ಹುಲ್ಲಣವರ ಉಪಸ್ಥಿತರಿದ್ದರು. ಪರಿಮಳಾ ತೊಟಗಂಟಿ ಸ್ವಾಗತಿಸಿ, ನಿರೂಪಿಸಿದರು.
ಮಳೆ ಚುರುಕು
ಹಾವೇರಿ: ಹಾವೇರಿ ಜಿಲ್ಲಾದ್ಯಂತ ಮಳೆ ಚುರುಕಾಗಿದೆ. ಆ. 1ರಂದು ಜಿಲ್ಲಾದ್ಯಂತ ಸರಾಸರಿ 21.2 ಮಿ.ಮೀ. ಮಳೆ ಸುರಿದಿದೆ. ಹಾವೇರಿ ತಾಲೂಕಿನಲ್ಲಿ 27.6 ಮಿ.ಮೀ., ರಾಣಿಬೆನ್ನೂರು 10, ಬ್ಯಾಡಗಿ 11.6, ಹಿರೇಕೆರೂರು 5.8, ಸವಣೂರು 19.9, ಶಿಗ್ಗಾಂವಿ 33.8, ಹಾನಗಲ್ಲ 40 ಮಿ.ಮೀ. ಮಳೆಯಾಗಿದೆ.