ಶಾಲೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ
ಶಿರಹಟ್ಟಿ: ಮಕ್ಕಳಲ್ಲಿನ ಅಪೌಷ್ಟಿಕತೆ, ರಕ್ತಹೀನತೆ ದೂರಮಾಡಲು ಸರ್ಕಾರ ಪರಿಪೂರ್ಣ ಆಹಾರ (ಕ್ಷೀರಭಾಗ್ಯ) ಯೋಜನೆ ಮೂಲಕ ಮಕ್ಕಳಿಗೆ ಹಾಲು ನೀಡುತ್ತಿದೆ. ಶಾಲೆಯಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಬಳಕೆ ಮಾಡಿಕೊಳ್ಳಬೇಕು ಎಂದು ತಹಸೀಲ್ದಾರ್ ಆರ್.ಡಿ. ಉಪ್ಪಿನ ಸಲಹೆ ನೀಡಿದರು.
ಅವರು ಗುರುವಾರ ಪಟ್ಟಣದ ಎ.ಎ. ಪಠಾಣ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಜರುಗಿದ ಕ್ಷೀರಭಾಗ್ಯ ಯೋಜನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಇದರ ಸದ್ಬಳಕೆ ಮಾಡಿಕೊಂಡು ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಮಾತನಾಡಿ, ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸುವ ಜತೆಗೆ ಕ್ರಿಯಾಶೀಲವಾಗಿ ಮಕ್ಕಳನ್ನು ಕಲಿಕೆಗೆ ಅಣಿಗೊಳಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ತಾಲೂಕಿನ 154 ಕೇಂದ್ರಗಳಲ್ಲಿ 27984 ಮಕ್ಕಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಇದು ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ. ಯೋಜನೆಗಳ ಯಶಸ್ಸಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಲ್. ಹಂಪಣ್ಣ, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಎಸ್.ಕೆ. ಹೊನ್ನೇಗೌಡರ, ಸಮನ್ವಯಾಧಿಕಾರಿ ಜಯಶ್ರೀ ಗುಡಿ, ಅಕ್ಷರ ದಾಸೋಹದ ತಾಲೂಕು ಮಟ್ಟದ ಅಧಿಕಾರಿ ಕೆ.ಎ. ಬಳಿಗೇರ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯ ಬಿ.ಪಿ. ಮುರಶಿಳ್ಳಿ, ಎಸ್.ಆರ್. ಭರಮಗೌಡ್ರ, ಎಸ್.ಎ. ನೆಗಳೂರ, ಎಸ್.ಎ. ತಡೇಲ, ಐ.ಸಿ. ಕಣವಿ, ಐ.ಸಿ. ಹಾವೇರಿ ಮುಂತಾದವರು ಉಪಸ್ಥಿತರಿದ್ದರು. ಎಂ.ಎ. ಮಕಾನದಾರ ಸ್ವಾಗತಿಸಿದರು. ಮಮ್ಮದಶಫಿ ಕಿಲ್ಲೇದಾರ ನಿರೂಪಿಸಿದರು. ಎಂ.ಎ. ಮುಲ್ಲಾ ವಂದಿಸಿದರು.
--