ಇಂದು ಪದಗ್ರಹಣ ಸಮಾರಂಭ
ಮುಳಗುಂದ: ಗದಗದ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾರ್ಗದರ್ಶನದಲ್ಲಿ ನಡೆಯುವ ವಲಯದ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಪದಗ್ರಹಣ ಸಮಾರಂಭ ಆ.3ರ ಬೆಳಗ್ಗೆ 11ಕ್ಕೆ ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿ ಕಲಾಭವನದಲ್ಲಿ ಜರುಗಲಿದೆ. ಅನ್ನದಾನೀಶ್ವರ ಶಾಖಾಮಠದ ಶಿವಯೋಗೀಶ್ವರ ಶ್ರೀಗಳು, ಸೊರಟೂರಿನ ವಿರಕ್ತಮಠದ ಆನ್ವೇರಿ ಶ್ರೀಗಳು ಸಾನ್ನಿಧ್ಯ ವಹಿಸುವರು. ಮುಳಗುಂದ ಅರ್ಬನ್ ಬ್ಯಾಂಕ್ನ ಚೇರ್ಮನ್ ಸಿ.ಬಿ. ಬಡ್ನಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಅಖಿಲ ಭಾರತ ನೂಲಿನ ಗಿರಣಿ ಅಧ್ಯಕ್ಷ ಶಿವಣ್ಣ ನೀಲಗುಂದ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸಂಜೀವ ನಾಯಕ, ಎಂ.ಡಿ. ಬಟ್ಟೂರ, ಪಿಎಸ್ಐ ಪರಮೇಶ್ವರ ಕವಟಗಿ, ಪಪಂ ಸದಸ್ಯೆ ಗಂಗಮ್ಮ ಶಿರಹಟ್ಟಿ, ಚನ್ನಬಸಪ್ಪ ಅಸುಂಡಿ ಮುಂತಾದವರು ಪಾಲ್ಗೊಳ್ಳುವರು ಎಂದು ಸಂಘಟಿಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟ್ಯಾಂಕ್ನಲ್ಲಿ ಬಿದ್ದು ವ್ಯಕ್ತಿ ಸಾವು
ಗದಗ: ಪಶು ಆಹಾರ ತಯಾರಿಕಾ ಘಟಕದ ಟ್ಯಾಂಕ್ನಲ್ಲಿ ಬಿದ್ದು ವ್ಯಕ್ತಿಯೊಬ್ಬ ಉಸಿರುಗಟ್ಟಿ ಮೃತಪಟ್ಟ ಘಟನೆ ಶುಕ್ರವಾರ ನಗರದಲ್ಲಿ ಜರುಗಿದೆ. ನಗರದ ಪಿಬಿ ರೋಡ್ನಲ್ಲಿರುವ ಎಳಿಮಳಿ ಪಶು ಆಹಾರ ತಯಾರಿಕಾ ಘಟಕದಲ್ಲಿ ಒಂದು ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದ ಮಲ್ಲನಗೌಡ ಶುಕ್ರವಾರ ಪಶು ಆಹಾರ ತಯಾರಿಸಲು ಬೇಕಾಗುವ ಕಚ್ಚಾ ವಸ್ತುಗಳಿರುವ ಟ್ಯಾಂಕ್ಗೆ ಬಿದ್ದು ಈ ದುರ್ಘಟನೆ ಸಂಭವಿಸಿದೆ. ಈ ಘಟಕ ವಿಶ್ವನಾಥ ಎಳಿಮಳಿ ಎಂಬುವವರಿಗೆ ಸೇರಿದೆ ಎನ್ನಲಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮೃತ ಮಲ್ಲನಗೌಡನ ಶವವನ್ನು ಹೊರತೆಗೆದಿದ್ದಾರೆ. ಈ ಕುರಿತು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶತಾಯುಷಿ ಪವಾಡೆಪ್ಪ ಬೆನಹಾಳ ನಿಧನ
ರೋಣ: ತಾಲೂಕಿನ ಕೊತಬಾಳ ಗ್ರಾಮದ ಪ್ರಗತಿಪರ ರೈತ ಶತಾಯುಷಿ ಪವಾಡೆಪ್ಪ ಗುರಪ್ಪ ಬೆನಹಾಳ (103) ಗುರುವಾರ ನಿಧನರಾದರು. ಮೃತರಿಗೆ ಪತ್ನಿ, ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗ ಇದ್ದರು. ಇವರ ನಿಧನಕ್ಕೆ ಶಾಸಕ ಜಿ.ಎಸ್. ಪಾಟೀಲ, ಜಿಪಂ ಸದಸ್ಯೆ ಶಕುಂತಲಾ ಗಾಣಿಗೇರ, ತಾಪಂ ಸದಸ್ಯ ಧರ್ಮಣ್ಣ ಭೂಸಗೌಡ್ರ, ಅಡವಿಸಿದ್ಧೇಶ್ವರ ಅಂಕಲಗಿ ಮಠದ ಗಂಗಾಧರೇಶ್ವರ ಶ್ರೀಗಳು ಸಂತಾಪ ಸೂಚಿಸಿದ್ದಾರೆ.