ಕ್ಷೀರಭಾಗ್ಯ ಯೋಜನೆ ಮಕ್ಕಳ ಪ್ರಗತಿಗೆ ಸಹಕಾರಿ: ಮುಂದಿನಮನಿ
ನರೇಗಲ್ಲ: ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಹಾಗೂ ಹಾಜರಾತಿ ಹೆಚ್ಚಿಸಲು ಸರ್ಕಾರದ ಕ್ಷೀರಭಾಗ್ಯ ಯೋಜನೆ ಅಕ್ಷರ ದಾಸೋಹದ ಜತೆಗೆ ನಡೆಯುತ್ತಿರುವುದು ಉತ್ತಮವಾದ ಒಂದು ಕಾರ್ಯಕ್ರಮ ಎಂದು ಎಸ್ಡಿಎಂಸಿ ಅಧ್ಯಕ್ಷ ಚನ್ನಬಸಪ್ಪ ಮುಂದಿನಮನಿ ಹೇಳಿದರು. ಅವರು ಗುರುವಾರ ಸಮೀಪದ ಹಾಲಕೇರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ಷೀರಭಾಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಸಿ.ಆರ್.ಪಿ ಎಚ್.ಎಸ್. ಮಂಗಳೂರ ಮಾತನಾಡಿ, ಉತ್ತಮ ಶಿಕ್ಷಣದ ಜತೆಗೆ ಸದೃಢವಾದ ದೇಹವನ್ನು ಬೆಳೆಸುವ ಸದುದ್ದೇಶದಿಂದ ಈ ಕ್ಷೀರಭಾಗ್ಯ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಇದು 1 ರಿಂದ 10ನೇ ತರಗತಿ ವ್ಯಾಸಾಂಗ ಮಾಡುತ್ತಿರುವ ಸರ್ಕಾರಿ, ಅನುದಾನಿತ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಈ ಯೋಜನೆ ದೊರಕಲಿದ್ದು, ಇದರಿಂದ ಮಕ್ಕಳಿಗೆ ಉತ್ತಮ ಪೌಷ್ಟಿಕತೆ ಹಾಗೂ ಹಾಜರಾತಿ ಹೆಚ್ಚಿಸಲು ತುಂಬಾ ಅನುಕೂಲಕಾರಿಯಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಸೂಚಿಸಿದರು. ಗ್ರಾಪಂ ಸದಸ್ಯ ಅಂದಪ್ಪ ಹುಲ್ಲಣ್ಣವರ, ಪ್ರಗತಿಪರ ರೈತ ಜಗದೀಶ ವದೇಗೋಳ, ಮುಖ್ಯೋಪಾಧ್ಯಾಯ ವಿ.ಎಚ್. ಬೇವಿನಕ, ಎಚ್.ಎಸ್. ಬಿಚಕಲ್ಲ ಇದ್ದರು. ಗಂಗಮ್ಮ ಹಡಪದ ಹಾಗೂ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಎಂ.ಎಲ್. ಬಡಿಗೇರ ಸ್ವಾಗತಿಸಿದರು. ಎಸ್.ಡಿ. ಅಬ್ಬಿಗೇರಿ ನಿರೂಪಿಸಿದರು. ಬಿ.ಐ. ಹಿರೇಹಾಳ ವಂದಿಸಿದರು.